
ಗದಗ, 23 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಶಾಸಕ ಡಾ. ಚಂದ್ರು ಲಮಾಣಿ ಅವರ ಮೇಲೆ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ, “ಟ್ರ್ಯಾಪ್ ಹಿಂದೆ ಸ್ವಾಮೀಜಿಗಳ ಕೈವಾಡ ಇದೆ” ಎಂಬ ಆರೋಪಗಳ ನಡುವೆ, ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಅವರು ಶಿರಹಟ್ಟಿ ಪಟ್ಟಣದಲ್ಲಿ ಸ್ಪಷ್ಟನೆ ನೀಡಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ವಾಮೀಜಿ, “ಶಾಸಕ ಡಾ. ಚಂದ್ರು ಲಮಾಣಿ ಬಗ್ಗೆ ನಾನು ಮಾತನಾಡಿದ್ದು ಸತ್ಯ. ವೈರಲ್ ಆಗಿರುವ ಆಡಿಯೋದಲ್ಲಿ ಮಾತನಾಡಿರುವುದು ನಾನೇ. ಅದು ಸುಮಾರು ಆರು ತಿಂಗಳ ಹಿಂದೆ ನಡೆದ ಮಾತುಕತೆ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ನಾನು ಹೇಳಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಆದರೆ, “ಈ ಲೋಕಾಯುಕ್ತ ಟ್ರ್ಯಾಪ್ ದಾಳಿಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ದಾಳಿಯ ಹಿಂದೆ ನನ್ನ ಕೈವಾಡವಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು” ಎಂದು ಅವರು ಆರೋಪವನ್ನು ತಳ್ಳಿಹಾಕಿದರು.
ಮಠದಿಂದ ಓಡಿಸಲು ಸಂಚು ಆರೋಪ
ಸ್ವಾಮೀಜಿ ತಮ್ಮ ಹೇಳಿಕೆಯಲ್ಲಿ ಗಂಭೀರ ಆರೋಪಗಳನ್ನು ಮುಂದಿಟ್ಟಿದ್ದಾರೆ.
“ಶಾಸಕ ಡಾ. ಚಂದ್ರು ಲಮಾಣಿ ಅವರು ನನ್ನನ್ನು ಗ್ರಾಮದೊಳಗಿಂದ ಹಾಗೂ ಮಠದಿಂದ ಹೊರಹಾಕಲು ಸಂಚು ರೂಪಿಸಿದ್ದರು. ಇದಕ್ಕಾಗಿ ಸುಮಾರು 18 ಲಕ್ಷ ರೂಪಾಯಿ ಖರ್ಚು ಮಾಡಿ ಯೋಜನೆ ರೂಪಿಸಿದ್ದರು” ಎಂದು ಸ್ವಾಮೀಜಿ ಆರೋಪಿಸಿದರು.
ಇಡೀ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ವಿರುದ್ಧ ಜನಾಭಿಪ್ರಾಯ ಉತ್ತಮವಾಗಿಲ್ಲ ಎಂದು ಹೇಳಿದ ಅವರು, “ವಿಶೇಷವಾಗಿ ಒಳ ಮೀಸಲಾತಿ ವಿಚಾರದಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ. ಅದನ್ನು ಪ್ರಶ್ನಿಸಿ ನಾನು ಬಿಜೆಪಿ ಹಾಗೂ ಶಾಸಕರ ವಿರುದ್ಧ ನಿಲುವು ತೆಗೆದುಕೊಂಡೆ. ಆಗಲೇ ನಾನು ಜನರಿಗೆ ‘ಬಿಜೆಪಿ ಹಾಗೂ ಶಾಸಕರಿಗೆ ಮತ ಹಾಕಬೇಡಿ’ ಎಂದು ಹೇಳಿದ್ದೆ. ಅದೇ ಅಸಮಾಧಾನ ಇಂದು ಈ ಮಟ್ಟಕ್ಕೆ ಬಂದಿದೆ” ಎಂದು ಹೇಳಿದರು.
ಆಡಿಯೋ ರಾಜಕೀಯಕ್ಕೆ ತಿರುಗಾಟ
ಸ್ವಾಮೀಜಿ ಆಡಿಯೋ ಕ್ಲಿಪ್ ಇದೀಗ ರಾಜಕೀಯ ಅಸ್ತ್ರವಾಗಿದ್ದು, “ಈ ಆಡಿಯೋವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ. ಆದರೆ ಲೋಕಾಯುಕ್ತ ದಾಳಿ ನಡೆದ ಪ್ರಕರಣಕ್ಕೂ ಆಡಿಯೋಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಕುಮಾರ ಮಹಾರಾಜ ಸ್ವಾಮೀಜಿ ಪುನರುಚ್ಚರಿಸಿದರು.
ರಾಜೀನಾಮೆ ಬಗ್ಗೆ ನಿಲುವಿಲ್ಲ
ಶಾಸಕ ಡಾ. ಚಂದ್ರು ಲಮಾಣಿ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ಸ್ವಾಮೀಜಿ ನಿರಾಕರಿಸಿದರು.
“ಅವರು ರಾಜೀನಾಮೆ ಕೊಡಬೇಕೋ ಬೇಡವೋ ಎನ್ನುವುದರ ಬಗ್ಗೆ ನಾನು ಏನು ಹೇಳುವುದಿಲ್ಲ. ಅದು ಅವರ ವೈಯಕ್ತಿಕ ಹಾಗೂ ಕಾನೂನು ವಿಚಾರ” ಎಂದರು.
ನಾನು ರಾಜಕೀಯ ಪಕ್ಷಗಳಲ್ಲ
ತಮ್ಮ ರಾಜಕೀಯ ನಿಲುವು ಕುರಿತು ಮಾತನಾಡಿದ ಸ್ವಾಮೀಜಿ, “ನಾನು ಕಾಂಗ್ರೆಸ್ನವನು ಅಲ್ಲ, ಬಿಜೆಪಿನವನು ಕೂಡ ಅಲ್ಲ. ನಾನು ಸ್ವಾಮೀಜಿ. ಧರ್ಮ ಮತ್ತು ಸಮಾಜದ ಪರ ನಿಲ್ಲುವುದೇ ನನ್ನ ಕರ್ತವ್ಯ” ಎಂದು ಹೇಳಿದರು.
ಕ್ಷೇತ್ರ ರಾಜಕೀಯದಲ್ಲಿ ತೀವ್ರತೆ
ಈ ಹೇಳಿಕೆಗಳ ನಂತರ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಲೋಕಾಯುಕ್ತ ಟ್ರ್ಯಾಪ್ ಪ್ರಕರಣ, ಆಡಿಯೋ ವಿವಾದ, ಸ್ವಾಮೀಜಿ–ಶಾಸಕರ ನಡುವಿನ ಸಂಘರ್ ಸೇರಿ ಗದಗ ಜಿಲ್ಲಾ ರಾಜಕೀಯದಲ್ಲಿ ಹೊಸ ತಿರುವು ಪಡೆದುಕೊಂಡಿದೆ.
ಮುಂದಿನ ದಿನಗಳಲ್ಲಿ ಈ ವಿದ್ಯಮಾನಗಳು ಯಾವ ದಿಕ್ಕಿಗೆ ಸಾಗುತ್ತವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP