
ಗದಗ :
ಆ್ಯಂಕರ್ : ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗದ 2025–26ನೇ ಸಾಲಿನ 9ನೇ ವಾರ್ಷಿಕ ಕ್ರೀಡಾಕೂಟವನ್ನು ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದ ವಿಶ್ವವಿದ್ಯಾಲಯದ ಕುಲಪತಿಗಳು(ಪ್ರ) ಹಾಗೂ ಕುಲಸಚಿವರಾದ ಪ್ರೊ. ಡಾ. *ಸುರೇಶ್ ವಿ. ನಾಡಗೌಡರ ಅವರು ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಅವಶ್ಯಕವಾಗಿದ್ದು, ಕ್ರೀಡಾ ಚಟುವಟಿಕೆಗಳು ಶಾರೀರಿಕ ಆರೋಗ್ಯ, ಮಾನಸಿಕ ಸಮತೋಲನ ಹಾಗೂ ಸಾಮಾಜಿಕ ಜವಾಬ್ದಾರಿತ್ವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಶಿಕ್ಷಣದ ಜೊತೆಗೆ ಕೌಶಲ್ಯ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸುವುದು ವಿಶ್ವವಿದ್ಯಾಲಯದ ಪ್ರಮುಖ ಗುರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೇಘಾ ಮುನವಳ್ಳಿಮಠ, ರಾಷ್ಟ್ರೀಯ ಕ್ರೀಡಾಪಟು, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕ್ರೀಡೆ ಜೀವನದಲ್ಲಿ ಆತ್ಮವಿಶ್ವಾಸ, ನಾಯಕತ್ವ ಹಾಗೂ ಸವಾಲುಗಳನ್ನು ಎದುರಿಸುವ ಮನೋಬಲವನ್ನು ಬೆಳೆಸುತ್ತದೆ ಎಂದು ಪ್ರೇರಣಾದಾಯಕ ಸಂದೇಶ ನೀಡಿದರು.
ಅದೇ ಸಂದರ್ಭದಲ್ಲಿ ಡಾ. ವಿನಯ ಪಾಟೀಲ, ಸ್ಕಿಲ್ ಪಿಕ್ಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಂತಾರಾಷ್ಟ್ರೀಯ ಭಾಷಣಕಾರರು, ಬೆಂಗಳೂರು ಅವರು ಮಾತನಾಡಿ, ಯುವಕರು ಕ್ರೀಡೆ ಮತ್ತು ಶಿಕ್ಷಣವನ್ನು ಸಮನ್ವಯಗೊಳಿಸಿಕೊಂಡು ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ವಿರೇಶಕುಮಾರ ವಿಜಯಪುರ, ಸಹಾಯಕ ನಿರ್ದೇಶಕರು, ದೈಹಿಕ ಶಿಕ್ಷಣ ಮತ್ತು ಕ್ರೀಡೆ ವಿಭಾಗ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಶಿಭೂಷಣ್ ದೇವೂರ, ಮೃತ್ಯುಂಜಯ ಮೆಣಸಿನಕಾಯಿ, ಎಂ.ಬಿ. ಚೆನ್ನಪ್ಪಗೌಡರ, ಪ್ರಕಾಶ್ ಮಾಚೇನಹಳ್ಳಿ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕ್ರೀಡಾಪಟುಗಳು, ಅಧ್ಯಾಪಕರು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP