ಟಾಟಾ ಕಂಪನಿಗೆ ಬೆದರಿಕೆ ಹಾಕಿದ ಕೊತ್ತೂರು ಮಂಜುನಾಥ್ ವಿರುದ್ಧ ಜೆಡಿಎಸ್ ಆಕ್ರೋಶ
ಟಾಟಾ ಕಂಪನಿಗೆ ಬೆದರಿಕೆ ಹಾಕಿದ ಕೊತ್ತೂರು ಮಂಜುನಾಥ್ ವಿರುದ್ಧ ಜೆಡಿಎಸ್ ಆಕ್ರೋಶ
ಜೆಡಿಎಸ್ ಮುಖಂಡ ಬಣಕನಹಳ್ಳಿ ನಟರಾಜ್


ಕೋಲಾರ ೨೩ ಫೆಬ್ರವರಿ (ಹಿ.ಸ) :

ಆ್ಯಂಕರ್ : ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿರುವ ಟಾಟಾ -ಏರ್ ಬಸ್ ಎಚ್ ೧೨೫ ಹೆಲಿಕಾಪ್ಟರ್ ಜೋಡಣಾ ಘಟಕಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಧಮ್ಕಿ ಹಾಕಿರುವುದು ಸರಿಯಲ್ಲ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ದುರ್ವರ್ತನೆ ತೋರಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಈ ಸಂಬ0ಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದಲ್ಲಿ ಖಾಸಗಿ ವಲಯದ ಮೊದಲ ಹೆಲಿಕಾಪ್ಟರ್ ಘಟಕ ಇದಾಗಿದ್ದು, ನಮ್ಮ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಇಡೀ ದೇಶದಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೋಲಾರ ಹಾಗೂ ರಾಜ್ಯದ ಪಾಲಿಗೆ ಇದು ಹೆಮ್ಮೆಯ ವಿಚಾರ. ಪ್ರಧಾನಿ ನರೇಂದ್ರ ಮೋದಿ, ಎನ್ಡಿಎ ಹಿರಿಯ ನಾಯಕ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಂದಾಗಿ ಈ ಘಟಕ ನಮ್ಮ ಜಿಲ್ಲೆಗೆ ಬಂದಿದೆ. ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಉತ್ತೇಜನ ನೀಡುತ್ತಿದ್ದಾರೆ ಎಂದು ಹೇಳಿದರು.

ಇಂಥ ಒಂದು ಘಟಕದಿಂದ ಜಿಲ್ಲೆಯ ಕೀರ್ತಿ ಹೆಚ್ಚಿದೆ. ಇದಕ್ಕೆ ಶಾಸಕ ಸಂತೋಷಪಡಬೇಕಿತ್ತು. ಆದರೆ, ವಿದ್ಯುತ್ ಕಟ್ ಮಾಡುತ್ತೇನೆ, ಹಳ್ಳ ತೋಡುತ್ತೇನೆ, ಟ್ರಾಕ್ಟರ್ ಡಿಕ್ಕಿ ಹೊಡೆಸುತ್ತೇನೆ ಎಂದು ಪಟ್ಟಣ ಪಂಚಾಯಿತಿಯಲ್ಲಿ ಕುಳಿತು ಧಮ್ಕಿ ಹಾಕಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬೇರೆ ಕಂಪನಿಗಳು ಬರಲು ಭಯಪಡುವ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ಹರಿಹಾಯ್ದರು.

ಇದೇ ಕಾರ್ಯಕ್ರಮಕ್ಕೆ ರಾಜ್ಯ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕೂಡ ಬಂದಿದ್ದಾರೆ. ಶಾಸಕರಿಗೂ ಇ-ಮೇಲ್ ಮೂಲಕ ಆಹ್ವಾನ ಹೋಗಿದೆ. ಇಷ್ಟಾಗಿಯೂ ಅವರು ಘಟಕದ ವಿರುದ್ಧ ಮಾತನಾಡಿರುವುದು ಒಪ್ಪುವಂಥ ವಿಚಾರ ಅಲ್ಲ. ಶಾಸಕರ ಇಂಥ ವರ್ತನೆ ಇದು ಮೊದಲಲ್ಲ. ಹಿಂದೆ ಸರ್ಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲರಿಗೆ ಅವಾಚ್ಯವಾಗಿ ಬೈಯ್ದಿದ್ದರು. ಕುಷ್ಠರೋಗ ಬರಲಿ, ಪ್ಲೇಗ್ ಬರಲಿ, ಕ್ಯಾನ್ಸರ್ ಬರಲಿ ಎಂದೆಲ್ಲಾ ಆಕ್ಷೇಪಾರ್ಹವಾಗಿ ಮಾತನಾಡುತ್ತಿರುತ್ತಾರೆ. ಇದನ್ನೆಲ್ಲಾ ಕೇಳಿ ಜನರೇ ಛಿ, ತೂ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಟಾಟಾ ಸಂಸ್ಥೆಯವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಟಾಟಾ ಟ್ರಸ್ಟ್ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ. ತಮ್ಮ ನೌಕರರಿಗೆ ಸೌಲಭ್ಯ ಒದಗಿಸಿದ್ದಾರೆ. ಮಹಿಳೆಯರಿಗೆ ದಾರಿ ದೀಪವಾಗಿದ್ದಾರೆ. ಅಂಥವರ ಬಗ್ಗೆ ಮಾತನಾಡುವುದು ತರವಲ್ಲ. ಇಂಥ ಹೀನಾಯ ಸ್ಥಿತಿ ಶಾಸಕರಿಗೆ ಬರಬಾರದಿತ್ತು. ತಾವೇನು ಮಾತನಾಡುತ್ತಿದ್ದೇವೆ ಎಂಬ ಅರಿವು ಜನಪ್ರತಿನಿಧಿಗಳಿಗೆ ಇರಬೇಕು. ಇಡೀ ಸಮಾಜ ತಮ್ಮನ್ನು ಗಮನಿಸುತ್ತಿರುತ್ತದೆ ಎಂದರು.

ಈ ಹೆಲಿಕಾಪ್ಟರ್ ಅನ್ನು ಸಿವಿಲ್ ಕಾರ್ಯ ಹಾಗೂ ರಕ್ಷಣೆ ಇಲಾಖೆಗೂ ಬಳಕೆ ಮಾಡಿಕೊಳ್ಳಬಹುದು, ತುರ್ತು ಕಾಲದಲ್ಲಿ ಔಷಧ ಸಾಗಿಸಲು ಬಳಕೆ ಮಾಡಬಹುದು. ಇಂಥ ಸಂಸ್ಥೆಯನ್ನು ತೆಗಳಲು ಅವರಿಗೆ ಮನಸ್ಸಾದರೂ ಹೇಗೆ ಬಂತು ಎಂದು ಪ್ರಶ್ನಿಸಿದರು. ಕೋಲಾರ ಹಾಳು ಮಾಡಲು ಈ ಶಾಸಕರು ಮುಳಬಾಗಿಲಿನಿಂದ ಬಂದಿದ್ದಾರೆಯೇ? ಇಂಥವರನ್ನು ಕೇವಲ ೧೫ ದಿನಗಳಲ್ಲಿ ಕ್ಷೇತ್ರದ ಮತದಾರರು ಆಯ್ಕೆ ಮಾಡಿದರೆ? ಎಂದು ಕೇಳಿದರು.

ಮೊದಲು ವೇಮಗಲ್ನಲ್ಲಿ ರಸ್ತೆ ಗುಂಡಿ ತುಂಬಿಸಲಿ, ತಾಲ್ಲೂಕು ಕಚೇರಿ, ನಗರಸಭೆಗಳಲ್ಲಿ ಲಂಚ ಪಡೆಯುತ್ತಿರುವವರ, ಭ್ರಷ್ಟಾಚಾರ ಎಸಗುತ್ತಿರುವವರ ಮೇಲೆ ಟ್ರಾಕ್ಟರ್ ಗುದ್ದಿಸಲಿ ಎಂದು ಸವಾಲು ಹಾಕಿದರು. ಇನ್ನಾದರೂ ಶಾಸಕರು ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಕೊತ್ತೂರು ಹಠಾವೋ, ಕೋಲಾರ ಬಜಾವೋ ಎಂಬ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಭದ್ರತೆ ಕಾರಣ ಕೆಲವರಿಗೆ ನಿರ್ಬಂಧ ವಿಧಿಸಿದ್ದಾರೆ. ಭಾರಿ ಭದ್ರತೆ ಒದಗಿಸಲಾಗಿತ್ತು. ಇದರ ಅರಿವು ಅವರಿಗೆ ಇರಬೇಕಿತ್ತು. ಶಿಷ್ಟಾಚಾರ ಉಲ್ಲಂಘನೆ ಆಗಿದ್ದರೆ ಸಂಬAಧಪಟ್ಟ ಕಾರ್ಖಾನೆಯ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಇತರ ಜನಪ್ರತಿಧಿಗಳ ಜೊತೆ ಸಭೆ ನಡೆಸಿ ಕ್ರಮ ವಹಿಸಬಹುದಾಗಿತ್ತು. ಹಾಗೆಯೇ, ಸ್ಥಳೀಯರಿಗೆ ಹಾಗೂ ರೈತರಿಗೆ ಉದ್ಯೋಗ ಕೊಡಿ ಎಂದು ಸಭೆ ನಡೆಸಿ ಕೇಳಲಿ, ಈ ಸಂಬ0ಧ ಧರಣಿ ಬೇಕಾದರೂ ನಡೆಸಲಿ, ಅದಕ್ಕೆ ನಮ್ಮ ಬೆಂಬಲವೂ ಇರಲಿದೆ. ಕೋಲಾರಕ್ಕೆ ಮತ್ತಷ್ಟು ಕಾರ್ಖಾನೆಗಳು, ಕಂಪನಿಗಳು ಬರಬೇಕು. ಈ ಮೂಲಕ ಮತ್ತಷ್ಟು ಹೆಸರು ಮಾಡಬೇಕು ಎಂದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ತಮ್ಮ ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮತ್ತೆ ಜಾತಿ ವಿಚಾರ ಮುನ್ನೆಲೆಗೆ ತಂದಿದ್ದಾರೆ. ತಮ್ಮನ್ನು ಬೆಳೆಸಿದ್ದು ಜೆಡಿಎಸ್ ಎಂಬುದನ್ನು ಅವರು ಮರೆತಿದ್ದಾರೆ. ವಕೀಲರಾಗಿದ್ದ ಅವರನ್ನು ಹಣಕಾಸು ಸಚಿವರನ್ನಾಗಿ, ಉಪಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲವೇ? ಆಗ ಜಾತಿ ಇರಲಿಲ್ಲವೇ? ಅವರು ಸ್ವಾರ್ಥಕ್ಕೆ ಕಾಂಗ್ರೆಸ್ ಗೆ ವಲಸೆ ಬಂದಿದ್ದಾರೆ? ಇಲ್ಲೂ ಎರಡು ಬಾರಿ ಮುಖ್ಯಮಂತ್ರಿ ಆಡಿದ್ದಾರೆ. ಕುರುಬ ಸಮುದಾಯ ಆಗ ಇರಲಿಲ್ಲವೇ, ಈಗ ಜಾತಿ ಬಂದಿದೆಯೇ ಎಂದು ಪ್ರಶ್ನಿಸಿದರು.

ನಮ್ಮಿಂದ ದೊಡ್ಡವರಾಗಿ ನಮ್ಮನ್ಮೇ ನಿಂದಿಸುವುದು ಸರಿ ಅಲ್ಲ. ಮುಂದೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಇದೇ ರೀತಿ ಮಾತು ಮುಂದುವರಿಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದಿಂಬ ನಾಗರಾಜಗೌಡ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯ್ ಗೌಡ ಹಾಗೂ ಮುಖಂಡ ಪಾಲಸಂದ್ರ ಲೇಔಟ್ ರವಿ ಇದ್ದರು.

ಚಿತ್ರ : ಜೆಡಿಎಸ್ ಮುಖಂಡ ಬಣಕನಹಳ್ಳಿ ನಟರಾಜ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande