
ಚಿತ್ರದುರ್ಗ, 23 ಫೆಬ್ರವರಿ (ಹಿ.ಸ.):
ಆ್ಯಂಕರ್:
ಭಾರತೀಯ ಆಯುರ್ವೇದ ಚಿಕಿತ್ಸಾ ಪದ್ಧತಿಯು ಇಂದು ಜಗತ್ತಿನಾದ್ಯಂತ ಅತ್ಯಂತ ವಿಶ್ವಾಸಾರ್ಹತೆ ಪಡೆದಿದ್ದು, ವಿಶ್ವಮಾನ್ಯತೆ ಗಳಿಸಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಆಯುಷ್ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ಜಿಲ್ಲಾ ಘಟಕ, ಬಾಪೂಜಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ನರಹರಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಚಳ್ಳಕೆರೆ ನಗರದ ನರಹರಿ ದೇವಸ್ಥಾನದ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎರಡು ದಿನಗಳ ಉಚಿತ ಆಯುರ್ವೇದ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಜನರಲ್ಲಿ ಆಯುರ್ವೇದದ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ ನಾಗಸಮುದ್ರ ಮಾತನಾಡಿ, ಜಿಲ್ಲಾ ಆಯುಷ್ ಇಲಾಖೆಯು ಆಯುಷ್ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸದಾ ಶ್ರಮಿಸುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಶೇಷ ಶಿಬಿರಗಳ ಆಯೋಜಿಸಲು ಸಹಕಾರ ನೀಡುತ್ತಿದೆ ಎಂದರು.
ಆಯುರ್ವೇದವು ಕೇವಲ ಚಿಕಿತ್ಸಾ ಪದ್ಧತಿಯಾಗಿರದೆ ಆರೋಗ್ಯಪೂರ್ಣ ಜೀವನಶೈಲಿ ತಿಳಿಸುವ ಪರಿಪೂರ್ಣ ವಿಜ್ಞಾನವಾಗಿದೆ. ಇಂದಿನ ದಾವಂತದ ಬದುಕಿನಿಂದ ಕಂಡುಬರುವ ಅಸಾಂಕ್ರಾಮಿಕ ವ್ಯಾಧಿಗಳಿಗೆ ಆಯುರ್ವೇದದಲ್ಲಿ ಪರಿಪೂರ್ಣ ಚಿಕಿತ್ಸೆಯಿದ್ದು, ಪಥ್ಯ ಮತ್ತು ಜೀವನಶೈಲಿಯ ಪಾಲನೆಯಿಂದ ಮಾತ್ರ ನಮಗೆ ಪರಿಪೂರ್ಣ ಆರೋಗ್ಯ ಸಾಧ್ಯ ಎಂದು ತಿಳಿಸಿದ ಅವರು, ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಬಾಪೂಜಿ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಸಿ.ಟಿ. ಬಸವರಾಜಪ್ಪ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯವಾಗಿದ್ದು, ಸನಾತನ ಆಯುರ್ವೇದ ವಿಜ್ಞಾನದ ಉಪಯೋಗ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ದೈನಂದಿನ ಆಹಾರ, ವಿಹಾರ ಮತ್ತು ಚಿಂತನೆಗಳು ಆರೋಗ್ಯಪೂರ್ಣವಾಗಿರಬೇಕು ಎಂದು ಕಿವಿಮಾತು ಹೇಳಿದರು. ಶ್ರೀ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ವೈ. ರಾಜಾರಾಮ್ ಗುರುಗಳು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಸರ್ಕಾರಿ ಆರ್ಯುವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉದಯ ಭಾಸ್ಕರ್, ನರಹರಿ ಸೇವಾ ಟ್ರಸ್ಟ್ ಸದಸ್ಯರಾದ ಮಲ್ಲಿಕಾರ್ಜುನಪ್ಪ, ರೇವಣಸಿದ್ದಪ್ಪ, ಮಾರುತಿ, ಸುಹಾಸ್, ಯತೀಶ್ ಎಂ. ಸಿದ್ದಾಪುರ, ವೆಂಕಟೇಶಮೂರ್ತಿ, ಬಾಪೂಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತೆಯ ಪ್ರಾಧ್ಯಾಪಕರಾದ ಡಾ. ಲಕ್ಷ್ಮಿ ನಾರಾಯಣ್, ಡಾ.ಅರುಣ್, ಡಾ. ಹೃತಿಕ್, ಮಾನಸ, ಸಂಜನಾ ಸೇರಿದಂತೆ ವಿವಿಧ ತಜ್ಞ ವೈದ್ಯರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa