
ಶಿವಮೊಗ್ಗ, 22 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವವು ಫೆಬ್ರವರಿ 24ರಿಂದ 28ರವರೆಗೆ ನಡೆಯಲಿದ್ದು, ರಾಜಬೀದಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜೆ–ಹರಕೆ–ಪ್ರಸಾದ ವಿನಿಯೋಗ ಹಾಗೂ ರಾಜ್ಯ ಮಟ್ಟದ ಬಯಲು ಕುಸ್ತಿ ಸೇರಿದಂತೆ ನಾನಾ ಕಾರ್ಯಕ್ರಮಗಳು ಜರುಗಲಿವೆ.
ಸಾವಿರಾರು ಭಕ್ತರು ವಾಹನಗಳಲ್ಲಿ ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಜಾತ್ರೆ ಅವಧಿಯಲ್ಲಿ ದೇವಾಲಯದ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆಗಳಲ್ಲಿ ಎಲ್ಲಾ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಫೆ.24ರಿಂದ 28ರವರೆಗೆ ಹೊಳಬಸ್ ಸ್ಟಾಪ್ನಿಂದ ಬೆಕ್ಕಿನ ಕಲ್ಮಠ–ರಾಮಣ್ಣ ಶ್ರೇಷ್ಠಿ ಪಾರ್ಕ್ವರೆಗೆ ವಾಹನಗಳ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಲಾಗಿದೆ.
ಫೆ.24ರಂದು ಬೆಳಗ್ಗೆ 3.00ರಿಂದ ರಾತ್ರಿ 11.00ರವರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ಗಾಂಧಿಬಜಾರ್–ಶಿವಪ್ಪ ನಾಯಕ ಸರ್ಕಲ್ವರೆಗೆ ಹಾಗೂ ಶಿವಪ್ಪ ನಾಯಕ ಸರ್ಕಲ್ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಸಂಪೂರ್ಣ ಸಂಚಾರ ಮತ್ತು ನಿಲುಗಡೆ ನಿಷೇಧ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa