ಶಾಸಕ ಡಾ. ಚಂದ್ರು ಲಮಾಣಿ ಸುತ್ತ ಆಡಿಯೋ ಬಾಂಬ್
ಗದಗ, 22 ಫೆಬ್ರವರಿ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವಂತೆ, ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಸಂಚು ರೂಪಿಸಲಾಗಿದೆ ಎನ್ನುವ ಅನುಮಾನಕ್ಕೆ ಕಾರಣವಾಗುವ ಆಡಿಯೋ ಸಂಭಾಷಣೆಗಳು ವೈರಲ್ ಆಗಿವೆ. ಆದರಹಳ್ಳಿ ಕವಿ ಮಠದ ಕುಮಾರ ಮಹಾರಾಜ ಸ್ವಾಮೀಜಿ ಹಾಗೂ ಇತರರ ನಡುವ
ಫೋಟೋ


ಗದಗ, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸುವಂತೆ, ಶಾಸಕ ಡಾ. ಚಂದ್ರು ಲಮಾಣಿ ವಿರುದ್ಧ ಸಂಚು ರೂಪಿಸಲಾಗಿದೆ ಎನ್ನುವ ಅನುಮಾನಕ್ಕೆ ಕಾರಣವಾಗುವ ಆಡಿಯೋ ಸಂಭಾಷಣೆಗಳು ವೈರಲ್ ಆಗಿವೆ. ಆದರಹಳ್ಳಿ ಕವಿ ಮಠದ ಕುಮಾರ ಮಹಾರಾಜ ಸ್ವಾಮೀಜಿ ಹಾಗೂ ಇತರರ ನಡುವಿನ ಮಾತುಕತೆ ಆಡಿಯೋ ಹೊರಬಿದ್ದಿದ್ದು, “ಮುಂದೆ ಇವನಿಗೆ ಟಿಕೆಟ್ ತಪ್ಪಿಸಲೇಬೇಕು” ಎಂಬ ಗಂಭೀರ ಹೇಳಿಕೆಗಳು ದಾಖಲಾಗಿವೆ.

ಆಡಿಯೋದಲ್ಲಿ, ಶಾಸಕನ ಕಾರ್ಯವೈಖರಿ, ರಸ್ತೆ ಕಾಮಗಾರಿಗಳ ಗುಣಮಟ್ಟ, ಬಿಲ್ಗಳ ಕುರಿತು ಟೀಕೆಗಳೊಂದಿಗೆ, “ಬೆಂಗಳೂರು ಮಟ್ಟದಲ್ಲಿ ಬೇರೆ ಸೂತ್ರ ಹಮ್ಮಿಕೊಂಡಿದ್ದೇವೆ” ಎಂಬ ಮಾತುಗಳು ಕೇಳಿಬಂದಿದ್ದು, ಇದು ಪೂರ್ವಯೋಜಿತ ರಾಜಕೀಯ ಸಂಚವೇ ಎಂಬ ಪ್ರಶ್ನೆ ಎದ್ದಿದೆ. “ಐದು ವರ್ಷದಲ್ಲಿ ಮೂರು ವರ್ಷ ಹೋಗಿವೆ, ಇನ್ನು ಎರಡು ವರ್ಷ ಮಾತ್ರ” ಎಂಬ ಉಲ್ಲೇಖವೂ ಆಡಿಯೋದಲ್ಲಿದೆ.

ಇದರ ನಡುವೆಯೇ, ಮತ್ತೊಂದು ಆಡಿಯೋ ಕೂಡಾ ವೈರಲ್ ಆಗಿದ್ದು, ಗುತ್ತಿಗೆದಾರ ವಿಜಯ ಪೂಜಾರ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ನಡುವಿನ ಹಣಕಾಸು ವಿಚಾರದ ಮಾತುಕತೆಗಳು ಬಹಿರಂಗವಾಗಿವೆ. ಲೋಕಾಯುಕ್ತ ದಾಳಿಗೆ ಮುಂಚೆ ನಡೆದಿತ್ತೆನ್ನಲಾದ ಈ ಸಂಭಾಷಣೆಯಲ್ಲಿ, ಕಾಮಗಾರಿ, ಬಿಲ್, ಚೇಂಜ್ ಆಫ್ ವರ್ಕ್, ರೀ-ಟೆಂಡರ್ ಕುರಿತ ಚರ್ಚೆಗಳಿವೆ. ಆಡಿಯೋದಲ್ಲಿ ಶಾಸಕನ ಧ್ವನಿ ಎಂದು ಹೇಳಲಾಗುತ್ತಿರುವ ವ್ಯಕ್ತಿ, “ನನ್ನ ಲೂಸ್ ಅಂದುಕೊಂಡಿಯಾ?”, “ನನ್ನ ಸರಳವಾಗಿ ಅಂದರೆ ನಡಾನೆ ಮುರಿಸ್ತೇನೆ” ಎಂಬಂತಹ ಕಠಿಣ ಹಾಗೂ ಬೆದರಿಕೆಯ ಮಾತುಗಳನ್ನು ಆಡಿರುವುದು ಕೇಳಿಬಂದಿದೆ. ಗುತ್ತಿಗೆದಾರನಿಗೆ ಕೆಲಸ ನಿಲ್ಲಿಸುವುದು, ಬಿಲ್ ಸಮಸ್ಯೆ, ಹಣಕಾಸಿನ ಅಡಚಣೆಗಳ ಬಗ್ಗೆ ತೀವ್ರ ವಾಗ್ವಾದ ನಡೆದಿದೆ.

ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಗ್ರಾಮದ ಬಳಿಯ ಸಣ್ಣ ನೀರಾವರಿ ಇಲಾಖೆಯ ತಡೆಗೋಡೆ ಸೇರಿದಂತೆ ಎರಡು ಕಾಮಗಾರಿಗಳ ಕುರಿತು ಪ್ರಸ್ತಾಪವಾಗಿದೆ. ಇನ್ನೂ ವರ್ಕ್ ಆರ್ಡರ್ ನೀಡಿಲ್ಲ, ಭೂಮಿ ಪೂಜೆ ಕೂಡಾ ಆಗಿಲ್ಲ ಎನ್ನುವ ಮಾತುಗಳು ಆಡಿಯೋದಲ್ಲಿವೆ.

ಒಟ್ಟಾರೆ, ಒಂದು ಕಡೆ ಸ್ವಾಮೀಜಿಗಳ ಆಡಿಯೋ ಸಂಭಾಷಣೆ ಮೂಲಕ ರಾಜಕೀಯ ಸಂಚು ಆರೋಪಗಳು, ಮತ್ತೊಂದೆಡೆ ಗುತ್ತಿಗೆದಾರರೊಂದಿಗೆ ನಡೆದ ಹಣಕಾಸು ಹಾಗೂ ಬೆದರಿಕೆ ಸಂಬಂಧಿತ ಆಡಿಯೋಗಳು ಗದಗ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿವೆ.

ಆಡಿಯೋಗಳ ಸತ್ಯಾಸತ್ಯತೆ ಏನು? ಇದು ನಿಜಕ್ಕೂ ಸಂಚುವೇ ಅಥವಾ ರಾಜಕೀಯ ಪೈಪೋಟಿಯ ಭಾಗವೇ? ಎನ್ನುವ ಪ್ರಶ್ನೆಗಳಿಗೆ ಮುಂದಿನ ತನಿಖೆ ಹಾಗೂ ಪ್ರತಿಕ್ರಿಯೆಗಳು ಉತ್ತರ ನೀಡಬೇಕಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande