ಬೀದರ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳಕ್ಕೆ ಸಚಿವ ಈಶ್ವರ ಖಂಡ್ರೆ ಚಾಲನೆ
ನಾನಾ
Khandre


ಬೀದರ್, 22 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಬೀದರ ಜಿಲ್ಲಾಮಟ್ಟದ ಸಿರಿಧಾನ್ಯ ಮೇಳ, ಮತ್ಸ್ಯ ಮೇಳ, ಉದ್ಯೋಗ ಮೇಳ, ಪುಷ್ಪ ಮೇಳ ಹಾಗೂ ತೋಟಗಾರಿಕೆ ಮೇಳ–2026ನ್ನು ಅರಣ್ಯ, ಜೀವವೈವಿಧ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ವಿವಿಧ ಇಲಾಖೆ ಮತ್ತು ಖಾಸಗಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಮೇಳವು ರೈತರು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಯುವಕರಿಗೆ ಜ್ಞಾನ–ಉದ್ಯೋಗ–ಉತ್ಪನ್ನ ಪ್ರದರ್ಶನದ ಸಮಗ್ರ ವೇದಿಕೆಯಾಗಿತು.

ಉದ್ಘಾಟನಾ ಭಾಷಣದಲ್ಲಿ ಸಚಿವರು, “ಸಿರಿಧಾನ್ಯಗಳು ಕೇವಲ ಆಹಾರವಲ್ಲ; ಆರೋಗ್ಯಪೂರ್ಣ ಜೀವನದ ಭದ್ರ ಆಧಾರ” ಎಂದು ಹೇಳಿದರು. ರಾಗಿ, ಜೋಳ, ಸಜ್ಜೆ, ನವಣೆ, ಊದಲು ಮುಂತಾದ ಸಿರಿಧಾನ್ಯಗಳಲ್ಲಿ ನಾರು (ಫೈಬರ್), ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ಅಗತ್ಯ ಖನಿಜಗಳು ಸಮೃದ್ಧವಾಗಿದ್ದು, ಮಧುಮೇಹ, ರಕ್ತದೊತ್ತಡ, ಸ್ಥೂಲತೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿವರಿಸಿದರು. ಮಕ್ಕಳ ಪೋಷಣೆ, ಗರ್ಭಿಣಿಯರ ಆರೋಗ್ಯ ಹಾಗೂ ವೃದ್ಧರ ಪೌಷ್ಟಿಕ ಅಗತ್ಯಗಳಿಗೆ ಸಿರಿಧಾನ್ಯಗಳು ಅತ್ಯುತ್ತಮವೆಂದರು.

ಹವಾಮಾನ ಬದಲಾವಣೆಯ ಸವಾಲಿನ ನಡುವೆ ಕಡಿಮೆ ನೀರಿನಲ್ಲಿ ಬೆಳೆಯುವ ಸಿರಿಧಾನ್ಯಗಳು ರೈತರಿಗೆ ಭದ್ರ ಆದಾಯ ನೀಡುವ ಶಾಶ್ವತ ಬೆಳೆಗಳಾಗಿವೆ. ಆರೋಗ್ಯ ಮತ್ತು ಕೃಷಿ—ಎರಡನ್ನೂ ರಕ್ಷಿಸುವ ಶಕ್ತಿ ಸಿರಿಧಾನ್ಯಗಳಲ್ಲಿ ಅಡಗಿದೆ ಎಂದು ಅವರು ಹೇಳಿದರು. ಜನರು ತಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಬೇಕು; ರೈತರು ಮೌಲ್ಯವರ್ಧಿತ ಉತ್ಪನ್ನಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಮೇಳದ ಅಂಗವಾಗಿ ಸ್ಥಾಪಿಸಲಾದ ನಾನಾ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳ ಮಳಿಗೆಗಳಿಗೆ ಭೇಟಿ ನೀಡಿ ಸಚಿವರು ವೀಕ್ಷಣೆ ನಡೆಸಿದರು. ಸಿರಿಧಾನ್ಯ ಆಧಾರಿತ ಆಹಾರ ಉತ್ಪನ್ನಗಳು, ತೋಟಗಾರಿಕೆ ತಂತ್ರಜ್ಞಾನ, ಮತ್ಸ್ಯೋದ್ಯಮ ಅವಕಾಶಗಳು ಮತ್ತು ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದು, ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಯುವಕರೊಂದಿಗೆ ಸಂವಾದ ನಡೆಸಿದರು.

ರೈತರು, ಯುವಕರು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ಇಂತಹ ಮೇಳಗಳು ಬಹುಮುಖ್ಯವಾದವು ಎಂದು ಸಚಿವರು ಅಭಿಪ್ರಾಯಪಟ್ಟರು

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande