
ಬೆಳಗಾವಿ, 22 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಬೆಳಗಾವಿ ಜಿಲ್ಲೆಯ ದೇಸೂರ್ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಕ್ಕಿದ್ದು, ಕಮಲ ನಗರದಲ್ಲಿ ಸುಮಾರು ₹1 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮದ ಜನರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಈ ರಸ್ತೆ ಕಾಮಗಾರಿ ಅತ್ಯಂತ ಅಗತ್ಯವಾಗಿದ್ದು, ಸತತ ಪ್ರಯತ್ನ ಹಾಗೂ ವಿಶೇಷ ಕಾಳಜಿಯ ಫಲವಾಗಿ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವೆ ತಿಳಿಸಿದರು. ಅಭಿವೃದ್ಧಿಯ ದಿಶೆಯಲ್ಲಿ ದೇಸೂರ್ ಗ್ರಾಮವನ್ನು ಮಾದರಿಯಾಗಿ ರೂಪಿಸುವುದು ತಮ್ಮ ಆದ್ಯತೆಯಾಗಿದೆ ಎಂದರು.
ಇದೇ ವೇಳೆ ಗ್ರಾಮದಲ್ಲಿ ಸುಮಾರು ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಾರುತಿ ದೇವಸ್ಥಾನದ ಕಟ್ಟಡ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು. ಕಾಮಗಾರಿಯ ಗುಣಮಟ್ಟ ಮತ್ತು ವೇಗವನ್ನು ಗಮನಿಸಿ, ಆದಷ್ಟು ಬೇಗ ದೇವಸ್ಥಾನದ ನಿರ್ಮಾಣ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಕೊರವಿ, ಭರಮಪ್ಪ ಪೂಜೇರಿ, ಪರಶುರಾಮ ಪೂಜೇರಿ, ದುರಗಪ್ಪ ನಾಯ್ಕ್, ಕಮಲೇಶ ಕೊರವಿ ಸೇರಿದಂತೆ ಮಹಿಳೆಯರು, ಗುತ್ತಿಗೆದಾರರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa