
ಬೀದರ್, 22 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಬೀದರ್ ನಗರದ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಎ.ಕೆ. ಆಯುರ್ವೇದಿಕ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡ ಆಯುರ್ವೇದ ಜಾಗೃತಿ ಅಭಿಯಾನಕ್ಕೆ ಅರಣ್ಯ, ಜೀವವೈವಿಧ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆಯುರ್ವೇದವು ನಮ್ಮ ಪುರಾತನ ಹಾಗೂ ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿದ್ದು, ಕೇವಲ ರೋಗ ಚಿಕಿತ್ಸೆಗಷ್ಟೇ ಸೀಮಿತವಲ್ಲ ಎಂದು ಹೇಳಿದರು. ರೋಗದ ಮೂಲ ಕಾರಣವನ್ನು ಗುರುತಿಸಿ ಅಡ್ಡಪರಿಣಾಮರಹಿತ ಹಾಗೂ ದೀರ್ಘಕಾಲಿಕ ಆರೋಗ್ಯವನ್ನು ಒದಗಿಸುವ ಸಾಮರ್ಥ್ಯ ಆಯುರ್ವೇದಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ವೇಗದ ಜೀವನಶೈಲಿ, ಅಸ್ವಸ್ಥ ಆಹಾರ ಪದ್ಧತಿ ಹಾಗೂ ಒತ್ತಡದಿಂದ ಉಂಟಾಗುತ್ತಿರುವ ಅನೇಕ ಕಾಯಿಲೆಗಳಿಗೆ ಆಯುರ್ವೇದ ಪರಿಣಾಮಕಾರಿ ಪರಿಹಾರ ನೀಡುತ್ತಿದೆ. ಸಾರ್ವಜನಿಕ ಆರೋಗ್ಯ ಸಂರಕ್ಷಣೆಯಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಜನರಿಗೆ ಆಯುರ್ವೇದ ಚಿಕಿತ್ಸೆಯ ಮಹತ್ವ ತಲುಪಿಸುವ ನಿಟ್ಟಿನಲ್ಲಿ ಇಂತಹ ಜಾಗೃತಿ ಅಭಿಯಾನಗಳು ಅಗತ್ಯವಾಗಿದ್ದು, ಪರಂಪರೆಯ ಚಿಕಿತ್ಸಾ ವಿಧಾನಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದು ಕಾಲದ ಅವಶ್ಯಕತೆ ಎಂದು ಸಚಿವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa