
ಹಾಸನ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಈಗಾಗಲೇ ಜನಸ್ಪಂದನಾ ಸಭೆಯಲ್ಲಿ ಅರ್ಜಿ ಸಲ್ಲಿಸಿದ ಅರ್ಜಿಗಳು ಜನಸ್ಪಂದನ ಸಭೆಯಲ್ಲಿ ಪುನರಾವರ್ತಿತವಾದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಜನ ಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಸನ, ಚನ್ನರಾಯಪಟ್ಟಣ, ಸಕಲೇಶಪುರದಲ್ಲಿ ಜನ ಸ್ಪಂದನ ಸಭೆಯಲ್ಲಿ ಸಲ್ಲಿಸಿರುವ ಅರ್ಜಿಗಳು ಬಾಕಿ ಇದ್ದು ಕೂಡಲೇ ಅರ್ಜಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರು 493 ಅರ್ಜಿಗಳನ್ನು ಸ್ವೀಕರಿಸಿ ಸಾಧ್ಯವಾಗುವ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು, ಕೆಲವು ಅರ್ಜಿಗಳ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ದುರಸ್ತಿ, ಪೋಡಿ ಹಾಗೂ ಪೌತಿ ಖಾತೆ, ಜಮೀನಿಗಳಿಗೆ ತೆರಳಲು ರಸ್ತೆಗಳು,ಸರ್ಕಾರಿ ಕೆರೆ ಹಾಗೂ ರಾಜ ಕಾಲುವೆ ಒತ್ತುವರಿ ವಿಷಯವಾಗಿ ಸಾರ್ವಜನಿಕರಿಂದ ಜನ ಸ್ಪಂದನ ಸಭೆಯಲ್ಲಿ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿವೆ.
ಜನಸ್ಪಂದನ ಸಭೆ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಏಪ್ರಿಲ್ ಮಾಹೆಯಲ್ಲಿ ಜನ ಗಣತಿ ಪ್ರಾರಂಭ ವಾಗುತ್ತಿದ್ದು, ಜನ ಗಣತಿಯೂ 2 ಹಂತದಲ್ಲಿ ನಡೆಯಲಿದೆ ಮೊದಲ ಹಂತದಲ್ಲಿ ಮನೆ ಮನೆಗಳ ಸಮೀಕ್ಷೆ ಏಪ್ರಿಲ್ 16 ರಿಂದ ಮೇ 16 ರವರಿಗೆ ನಡೆಯಲಿದೆ ಎಲ್ಲಾ ಅಧಿಕಾರಿಗಳು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿರಬೇಕು ಎಂದರು.
ಫೆ.25 ರಂದು ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆ ನಡೆಯಲಿದ್ದು, ಹಿಂದಿನ ಕೆ.ಡಿ.ಪಿ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಅನುಪಾಲನಾ ವರದಿಯನ್ನು ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆ ಆರಂಭವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಣಿ-ಪಕ್ಷಿ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಪಶುಪಾಲನಾ ಇಲಾಖೆಯವರು ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯದಂತೆ ಪರಿಶೀಲಿಸಿ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ಕಂಟ್ರೋಲ್ ರೂಂ ಅನ್ನು ತೆರೆಯಬೇಕು, ಕಂಟ್ರೋಲ್ ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಮಾರ್ಚ್ ಮಾಹೆಯಲ್ಲಿ ಉದ್ಯೋಗ ಮೇಳವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಇಲಾಖೆಗಳ ಸಹಕಾರದೊಂದಿಗೆ ಆಯೋಜನೆ ಮಾಡಲಾಗುತ್ತಿದ್ದು, ಇದರಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗೂ ಪಾಲ್ಗೊಳ್ಳಬೇಕು ಹಾಗೂ ಹೆಚ್ಚಿನ ಪ್ರಚಾರ ನೀಡಬೇಕು ಎಂದರು.
ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಐ.ಟಿ.ಐ, ಡಿಪ್ಲೊಮಾ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಬಹುದು ಜಿಲ್ಲೆಯ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಹೇಮಲತಾ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa