
ಬೆಂಗಳೂರು, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಫೆಬ್ರವರಿ 26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಿಐಡಿ ಅಧಿಕಾರಿಗಳು ಬೈರತಿ ಬಸವರಾಜ್ ಅವರನ್ನು ಬಂಧಿಸಿ ಏಳು ದಿನಗಳ ಕಾಲ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಇಂದು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಮುಂದಿನ ವಿಚಾರಣೆ ತನಕ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ಸೂಚಿಸಿದೆ.
ವಿಚಾರಣೆ ವೇಳೆ ಬೈರತಿ ಬಸವರಾಜ್ ಪರ ವಕೀಲರು, ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದಾಗಿ ನ್ಯಾಯಾಲಯದ ಗಮನಕ್ಕೆ ತಂದರು. ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಿಗದಿಯಾಗಿರುವುದರಿಂದ ಅಂದಿನವರೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ನೀಡುವಂತೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಯಾಗಿ ಸಿಐಡಿ ಪರ ವಕೀಲ ಅಶೋಕ್ ನಾಯಕ್ ವಾದ ಮಂಡಿಸಿ, ಜಯದೇವ ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲಿ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಉಲ್ಲೇಖಗೊಂಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದ್ದರಿಂದ ಜೈಲಿನಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬಹುದು ಎಂದು ವಾದಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ಬೈರತಿ ಬಸವರಾಜ್ ಅವರನ್ನು ಫೆ.26ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲು ಆದೇಶಿಸಿತು. ಜೊತೆಗೆ ಜಯದೇವ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಡಯಟ್ ಹಾಗೂ ಅಗತ್ಯ ಚಿಕಿತ್ಸೆಗಳನ್ನು ಜೈಲಿನಲ್ಲಿಯೇ ಮುಂದುವರಿಸುವಂತೆ ಸೂಚಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa