ಸ್ನೇಹಮಯಿ ಕೃಷ್ಣ ಬಂಧನ ; ಸೇಡಿನ ರಾಜಕಾರಣ : ವಿಜಯೇಂದ್ರ
ಬೆಂಗಳೂರು, 21 ಫೆಬ್ರವರಿ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ತನಿಖಾ ಸಂಸ್ಥೆಗಳು ಮತ್ತು ಪೊಲೀಸ್ ವ್ಯವಸ್ಥೆಯನ್ನು ನ್ಯಾಯಕ್ಕಾಗಿ ಹೋರಾಡುವವರನ್ನು ಹತ್ತಿಕ್ಕಲು ಬಳಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡ
Byv


ಬೆಂಗಳೂರು, 21 ಫೆಬ್ರವರಿ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ತನಿಖಾ ಸಂಸ್ಥೆಗಳು ಮತ್ತು ಪೊಲೀಸ್ ವ್ಯವಸ್ಥೆಯನ್ನು ನ್ಯಾಯಕ್ಕಾಗಿ ಹೋರಾಡುವವರನ್ನು ಹತ್ತಿಕ್ಕಲು ಬಳಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಅತಿದೊಡ್ಡ ಹಗರಣವೆಂದು ಹೇಳಲಾಗುತ್ತಿರುವ ಮುಡಾ ನಿವೇಶನ ಹಗರಣದ ವಿರುದ್ಧ ದೂರು ನೀಡಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಕ್ರಮಬದ್ಧ ವಿಧಾನಗಳನ್ನು ಅನುಸರಿಸದೇ ಬಂಧಿಸಿರುವುದು ಕಾಂಗ್ರೆಸ್ ಸರ್ಕಾರದ ಸೇಡಿನ ರಾಜಕಾರಣದ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಮುಡಾ ಹಗರಣದಲ್ಲಿ ಭಾಗಿಯಾದ ಪ್ರಭಾವಿಗಳು ಮತ್ತು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದ ಹಿನ್ನೆಲೆ ಸ್ನೇಹಮಯಿ ಕೃಷ್ಣ ವಿರುದ್ಧ ಒಂದಿಲ್ಲೊಂದು ಸುಳ್ಳು ದೂರುಗಳನ್ನು ದಾಖಲಿಸಲು ಪ್ರಯತ್ನ ನಡೆದಿತ್ತು. ಇದೀಗ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ಕೋರ್ಟ್ ಹೊರಭಾಗದಲ್ಲಿ ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದಮನ ಮಾಡುವ ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಸಂಬಂಧ ದಿನನಿತ್ಯ ನೂರಾರು ದೂರುಗಳು ದಾಖಲಾಗುತ್ತಿದ್ದರೂ, ಸಾಮಾನ್ಯರ ದೂರುಗಳ ವಿಚಾರದಲ್ಲಿ ತಾತ್ಸಾರ ತೋರುವ ಪೊಲೀಸರು ಈ ಪ್ರಕರಣದಲ್ಲಿ ಅತಿಯಾದ ಆಸಕ್ತಿ ತೋರಿರುವುದು ಸಂಶಯಾಸ್ಪದವಾಗಿದೆ. ಸ್ನೇಹಮಯಿ ಕೃಷ್ಣರನ್ನು ಕ್ರಿಮಿನಲ್ ಆರೋಪಿಯಂತೆ, ಭಯೋತ್ಪಾದಕನಂತೆ ನಡೆಸಿಕೊಂಡಿರುವುದು ಭ್ರಷ್ಟ ವ್ಯವಸ್ಥೆಯನ್ನು ರಕ್ಷಿಸುವ ದುರುದ್ದೇಶದಿಂದ ಕೂಡಿದೆ ಎಂದು ಅವರು ಆರೋಪಿಸಿದರು.

ಭ್ರಷ್ಟಾಚಾರ, ದೌರ್ಜನ್ಯ ಮತ್ತು ಹಗರಣಗಳನ್ನು ಮುಚ್ಚಿಹಾಕಲು ಪೊಲೀಸ್ ಹಾಗೂ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ ಎಂಬ ಅರಿವು ಇರಲಿ. ಇಂತಹ ದುರ್ಮಾರ್ಗದ ನಡೆಗಳು ಸರ್ಕಾರಕ್ಕೇ ತಿರುಗುಬಾಣವಾಗಲಿವೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಮುಚ್ಚಿಹಾಕಲು ಅವಕಾಶ ನೀಡುವುದಿಲ್ಲ. ಪ್ರತಿ ಪಕ್ಷವಾಗಿ ಬಿಜೆಪಿ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande