






ಬಳ್ಳಾರಿ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಮಹತ್ವ ಹೊಂದಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಸಂಗನಕಲ್ಲಿನ ಹೀರೆಗುಡ್ಡಕ್ಕೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರ ನೇತೃತ್ವವದಲ್ಲಿ ಅಧಿಕಾರಿಗಳ ತಂಡವು ಚಾರಣ ಕೈಗೊಂಡು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಮಾಡುವಲ್ಲಿ ಚರ್ಚೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು, ಸಂಗನಕಲ್ಲು ಬಳ್ಳಾರಿ ಜಿಲ್ಲೆಯ ಅತ್ಯಂತ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದು. ಸಾವಿರಾರು ವರ್ಷಗಳಿಗೂ ಹಿಂದೆ ಈ ಕಲ್ಲಿನ ಬೆಟ್ಟಗಳಲ್ಲಿ ವಾಸಿಸುತ್ತಿದ್ದ ನವಶಿಲಾಯುಗದ ಮಾನವರ ಜೀವನದ ಅಪೂರ್ವ ನೋಟಗಳನ್ನು ನೀಡುತ್ತದೆ. ಈ ಸ್ಥಳದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಹಿರೇಗುಡ್ಡದ ಮೇಲ್ಭಾಗದಲ್ಲಿರುವ ಅಪರೂಪದ ಶಿಲಾ ಕೆತ್ತನೆಗಳು ಮತ್ತು ರೇಖಾ ಚಿತ್ರಗಳನ್ನು ವೀಕ್ಷಿಸಲಾಯಿತು. ರೇಖಾ ಚಿತ್ರಗಳು ಮತ್ತು ಕತ್ತನೆಗಳು ನವಶಿಲಾಯುಗದ ಕಾಲಕ್ಕೆ ಸೇರಿವೆ. ಇವು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿದ್ದು, ಇವುಗಳನ್ನು ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ ಎಂದರು.
ಹಿರೇಗುಡ್ಡವನ್ನು `ಪ್ರವಾಸಿಸ್ನೇಹಿ’ಯಾಗಿಸಲು ಮತ್ತು ಇಲ್ಲಿನ ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಇಲ್ಲಿ ನಡೆದಿರುವ ವೈಜ್ಞಾನಿಕ ಸಂಶೋಧನೆಗಳು ನಮ್ಮ ಪೂರ್ವಜರ ಜೀವನಶೈಲಿ ಮತ್ತು ಇತಿಹಾಸದ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದಿಂದ ಈ ಭೇಟಿಯು ಸಂಗನಕಲ್ಲು ಪ್ರದೇಶವು ಮುಂದಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾಗಿ ಹೊರಹೊಮ್ಮಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಿದೆ ಎಂದರು.
ಅಭಿವೃದ್ಧಿಯ ಹೆಸರಿನಲ್ಲಿ ಯಾವುದೇ ಕೃತಕ ವಸ್ತುಗಳನ್ನು ಬಳಸದೆ, ಈ ತಾಣದ ನೈಸರ್ಗಿಕ ಪರಿಸರವನ್ನು ಹಾಗೆಯೇ ಉಳಿಸಿಕೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗುವುದು. ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತಾಣಕ್ಕೆ ತಲುಪಲು ಸುಸಜ್ಜಿತವಾದ ಕಾಲುದಾರಿ, ಮಾಹಿತಿ ಫಲಕಗಳು ಮತ್ತು ಅಗತ್ಯ ಮಾರ್ಗದರ್ಶನ ಸೌಲಭ್ಯಗಳನ್ನು ಒದಗಿಸಲು ಯೋಜಿಸಲಾಗುವುದು ಎಂದರು.
ಈ ತಾಣವು ಈ ಹಿಂದೆ ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಸ್ಥಳ ಪರಿಶೀಲನೆಯು ಅತ್ಯಂತ ಅರ್ಥಪೂರ್ಣವಾಗಿದ್ದು, ಈ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಯಾವ ರೀತಿ ಅಭಿವೃದ್ಧಿಪಡಿಸಬೇಕು ಮತ್ತು ಪ್ರವಾಸಿಗರನ್ನು ಹೇಗೆ ಆಕರ್ಷಿಸಬೇಕು ಎಂಬ ಯೋಜನೆ ರೂಪಿಸುವುದರ ಕುರಿತು ಒಂದು ಸ್ಪಷ್ಟವಾದ ಚಿತ್ರಣ ದೊರೆತಿದೆ.
ಮೂಲಭೂತ ಸೌಕರ್ಯಗಳ ಸದ್ಬಳಕೆ ಮತ್ತು ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ನೀಲಿನಕ್ಷೆ ಸಿದ್ಧಪಡಿಸಲಾಗುವುದು. ಈ ಕ್ರಮಗಳಿಂದಾಗಿ ಸ್ಥಳೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ಸಿಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವಂತೆ ಹಾಗೂ ಇದಕ್ಕೆ ಅಗತ್ಯ ಸೌಲಭ್ಯ, ಸಹಕಾರ ಜಿಲ್ಲಾಡಳಿತದಿಂದ ಒದಗಿಸಲಾಗುವುದು ಎಂದು ಹೇಳಿದರು.
ಈ ಪ್ರದೇಶದಲ್ಲಿ ಸಂಶೋಧನೆ ನಡೆಸಿ ಇಲ್ಲಿನ ಐತಿಹಾಸಿಕ ಮಹತ್ವವನ್ನು ಪರಿಚಯಿಸಿದ ಇತಿಹಾಸ ತಜ್ಞ ಪೆÇ್ರ. ಕೋರಿಶೆಟ್ಟರ್, ಸದಸ್ಯ ಎಂ. ಅಹಿರಾಜ್ ಮತ್ತು ಅವರ ತಂಡದ ಶ್ರಮವನ್ನು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಶ್ಲಾಘಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಸಹಾಯಕ ಆಯುಕ್ತ ರಾಜೇಶ್ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್