
ಚಿತ್ರದುರ್ಗ, 21 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಪ್ರಸಕ್ತ ಹಣಕಾಸು ವರ್ಷದ ಅನುದಾನವನ್ನು ಮಾರ್ಚ್ ಅಂತ್ಯದೊಳಗೆ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದ ಅವರು, ಜಲಜೀವನ್ ಮಿಷನ್ ಕಾಮಗಾರಿಗಳ ಕಳಪೆ ಗುಣಮಟ್ಟದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ದೋಷಪೂರಿತ ಕಾಮಗಾರಿಗಳಿಗೆ ಗುತ್ತಿಗೆದಾರರ ಬಿಲ್ ಪಾವತಿಯನ್ನು ತಕ್ಷಣ ತಡೆಹಿಡಿಯುವಂತೆ ಸೂಚಿಸಿದರು. 1,500 ಕಾಮಗಾರಿಗಳ ಪೈಕಿ 160 ಕಳಪೆ ಎಂಬ ತಾಂತ್ರಿಕ ವರದಿ ಬಂದಿದ್ದು, ಗುಣಮಟ್ಟ ಪ್ರಮಾಣಪತ್ರ ಸಿಗುವವರೆಗೆ ಬಾಕಿ ಅನುದಾನ ಬಿಡುಗಡೆ ಆಗುವುದಿಲ್ಲ ಎಂದರು.
ಕುಡಿಯುವ ನೀರಿನ ಸಮಸ್ಯೆಗೆ ಆದ್ಯತೆ ನೀಡಬೇಕು, ಬೇಸಿಗೆಗೂ ಮುನ್ನ ಹಾಳಾಗಿರುವ 140 ಶುದ್ಧ ನೀರಿನ ಘಟಕಗಳನ್ನು ದುರಸ್ತಿಗೊಳಿಸಬೇಕು ಎಂದು ಗಡುವು ನೀಡಿದರು. ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಕ್ಷೇತ್ರಗಳ ಯೋಜನೆಗಳನ್ನು ಸಮನ್ವಯದಿಂದ ಜಾರಿಗೆ ತರಬೇಕು ಎಂದು ಹೇಳಿದರು.
ಇತ್ತೀಚಿನ ಕರಡಿ ಸಾವು ಪ್ರಕರಣಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಅಕ್ರಮ ಬ್ಲಾಸ್ಟಿಂಗ್ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ವಿದ್ಯಾರ್ಥಿ ನಿಲಯಗಳಲ್ಲಿ ಕಂಡುಬಂದ ಇಲಿಜ್ವರ ಪ್ರಕರಣದ ಹಿನ್ನೆಲೆ ಸ್ವಚ್ಛತೆ ಮತ್ತು ನೀರಿನ ಗುಣಮಟ್ಟ ಪರಿಶೀಲನೆಗೆ ಪ್ರತಿವಾರ ತಪಾಸಣೆ ನಡೆಸುವಂತೆ ಸೂಚಿಸಿದರು.
ಜಿಲ್ಲೆಯ ಕಂಪನಿಗಳು ಸಿಎಸ್ಆರ್ ನಿಧಿಯನ್ನು ಸ್ಥಳೀಯ ಅಭಿವೃದ್ಧಿಗೆ ಬಳಸುವ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಸಂಸದರು ಸೂಚಿಸಿದರು. ಸಭೆಯಲ್ಲಿ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa