
ಕೋಲಾರ, ೨೧ ಫೆಬ್ರವರಿ (ಹಿ.ಸ) :
ಆ್ಯಂಕರ್ : ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ನಿಖರ ಅಂಕಿ-ಅಂಶಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ೧೧ನೇ ಕೃಷಿ ಗಣತಿ, ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ವಿವಿಧ ಸಮನ್ವಯ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ೧೧ನೇ ಕೃಷಿ ಗಣತಿಯ ೩ನೇ ಹಂತದ ಕ್ಷೇತ್ರ ಕಾರ್ಯಕ್ಕಾಗಿ ೧೨೮ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಗಣತಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಹಂತದಲ್ಲಿ ರೈತರಿಂದ ಜನಸಂಖ್ಯೆ, ಆರ್ಥಿಕ ಸ್ಥಿತಿಗತಿ, ಶೈಕ್ಷಣಿಕ ಪ್ರೊಫೈಲ್, ಕೃಷಿ ಸಾಲ ಹಾಗೂ ಸಾವಯವ ಕೃಷಿ ಕುರಿತಾದ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ೨೦೨೧-೨೨ರ ಗಣತಿಯ ಅಂಕಿ-ಅಂಶಗಳ ಪ್ರಕಾರ, ೨೦೧೫-೧೬ಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ರೈತರ ಸಂಖ್ಯೆಯಲ್ಲಿ ಶೇ. ೨೧.೨ ರ? ಮತ್ತು ಕೃಷಿ ವಿಸ್ತೀರ್ಣದಲ್ಲಿ ಶೇ. ೫.೪ ರ? ಹೆಚ್ಚಳವಾಗಿದೆ ಎಂದರು.
೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು ೧,೫೩,೨೭೧ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಮೀಕ್ಷೆ ನಡೆಸಲಾಗಿದೆ. ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಂಚಿಕೆಯಾಗಿದ್ದ ೨,೧೨೮ ಬೆಳೆ ಕಟಾವು ಪ್ರಯೋಗಗಳ ಪೈಕಿ ೧,೮೩೯ ಪ್ರಯೋಗಗಳು ಪೂರ್ಣಗೊಂಡಿವೆ. ಹಿಂಗಾರು ಹಂಗಾಮಿನಲ್ಲಿ ೩೬೮ ಪ್ರಯೋಗಗಳ ಗುರಿ ಹೊಂದಲಾಗಿದ್ದು, ಈವರೆಗೆ ೨೭೬ ಪ್ರಯೋಗಗಳು ಮುಕ್ತಾಯಗೊಂಡಿವೆ. ಉಳಿದ ಕಾರ್ಯವು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಕೃಷಿ ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಕರ್ತವ್ಯ ಲೋಪ ಎಸಗಿದ ಅಥವಾ ಪ್ರಯೋಗಗಳನ್ನು ಬಾಕಿ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ನಾಗರಿಕ ನೋಂದಣಿ ಪದ್ಧತಿಯಡಿ ಜಿಲ್ಲೆಯಲ್ಲಿ ೨೦೨೫ರ ಸಾಲಿನಲ್ಲಿ ಒಟ್ಟು ೨೨,೧೯೪ ಜನನಗಳು ಹಾಗೂ ೧೩,೦೧೩ ಮರಣಗಳು ನೋಂದಣಿಯಾಗಿವೆ. ಜನನ ಮತ್ತು ಮರಣ ಸಂಭವಿಸಿದ ೨೧ ದಿನಗಳ ಒಳಗಾಗಿ ಉಚಿತವಾಗಿ ನೋಂದಣಿ ಮಾಡಿಸಿ ಪ್ರಮಾಣ ಪತ್ರ ಪಡೆಯುವುದು ಕಾನೂನುಬದ್ಧವಾಗಿ ಕಡ್ಡಾಯವಾಗಿದೆ. ಸಾರ್ವಜನಿಕರು ಶಾಲಾ ದಾಖಲಾತಿ, ವಿಮೆ ಹಾಗೂ ಆಸ್ತಿ ಹಕ್ಕುಗಳ ಕಾರ್ಯಗಳಿಗಾಗಿ ಈ ಪ್ರಮಾಣ ಪತ್ರಗಳನ್ನು ಬಳಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ’ಇ-ಜನ್ಮ’ ಪೋರ್ಟಲ್ ಸಂಪರ್ಕಿಸಲು ಕೋರಲಾಗಿದೆ ಎಂದು ಜಿಲ್ಲಾ ಸಂಖ್ಯೆ ಸಂಗ್ರಹನಾಧಿಕಾರಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಎಸ್. ಎಂ. ಮಂಗಳ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಚಲಪತಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಗುರುಮಹದೇವಪ್ಪ ಹಾಗೂ ಕೃಷಿ ಇಲಾಖೆಯ ಉಪನಿರ್ದೇಶಕ ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕರು ಅಂಬಿಕಾ ಲೀಡ್ ಬ್ಯಾಂಕ್ ಮ್ಯಾನೇಜರ್ ಜೋಶಿ ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರ - ಕೋಲಾರ ಜಿಲ್ಲಾಧಿಕಾರಿ ಡಾ.ರವಿ ಕೃಷಿಗಣತಿಯ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್