

ಬಳ್ಳಾರಿ, 20 ಫೆಬ್ರವರಿ (ಹಿ.ಸ.) :
ಆ್ಯಂಕರ್ : ನಡೆ ಮತ್ತು ನುಡಿ ಒಂದಾಗಿರುವವರ ಮಾತಿಗೆ ಸಮಾಜದಲ್ಲಿ ಬದಲಾವಣೆ ಮೂಡಿಸುವ ಶಕ್ತಿ ಇರುತ್ತದೆ ಎಂದು ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಕೊಟ್ಟೂರು ಸ್ವಾಮಿ ಮಠದಲ್ಲಿ ಅಕ್ಕನ ಬಳಗದ ಸಹಯೋಗದಲ್ಲಿ ನಡೆದ `ಶಿವಾನುಭವ ಸಂಪದ-10'ರಲ್ಲಿ ಆಶೀರ್ವಚನ ನೀಡಿದ ಅವರು, ಕತ್ತಲನ್ನು ಓಡಿಸಲು ದೀಪ ಬೇಕು. ದೀಪದ ಬೆಳಕು ಬೇಕು. ಜಗತ್ತಿನ ಅಂಧಕಾರವನ್ನು ಓಡಿಸಲು ಜ್ಯೋತಿ ಬೇಕು. ಆ ಜ್ಯೋತಿಯು ಮಾತಾಗಬೇಕು. ಮಾತೇ ಬೆಳಕು ಆಗಬೇಕು. ಆ ಮಾತು ಜ್ಯೋತಿರ್ಲಿಂಗ ಆಗಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ಶ್ರವಣ (ಕಿವಿ) ಇಂದ್ರಿಯ ಅತ್ಯಂತ ಚುರುಕನ್ನು ಪಡೆದಿದೆ. ಎಲ್ಲೆಲ್ಲೂ ಮಾತೇ ಚಾಲ್ತಿಯಲ್ಲಿದೆ. ಪ್ರಸ್ತುತ ದಿನಗಳಲ್ಲಿ ಮಾತಿಗೆ ಸಾಕಷ್ಟು ಮಹತ್ವವಿದೆ. ಮಾತಿಗೆ ದೊಡ್ಡ ಬೆಲೆ ಇದೆ. ಸತ್ಯ, ಪ್ರಾಮಾಣಿಕತೆ, ಮಾನವೀತೆಗಳನ್ನು ಒಳಗೊಂಡಿರುವ ಮಾತಿಗೆ ಸಾಕಷ್ಟು ಮೌಲ್ಯವಿದೆ. ಅದರಲ್ಲೂ ನಡೆ ಮತ್ತು ನುಡಿ ಒಂದಾಗಿರುವ ಮಾತಿಗೆ ಸಮಾಜದಲ್ಲಿ ಬಲದಾವಣೆ ತರುವ ಶಕ್ತಿ ಇರುತ್ತದೆ ಎಂದರು.
ರಾವ್‍ಬಹುದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ. ಎ. ತಿಮ್ಮನಗೌಡ ಅವರು, `ಮಾತೆಂಬುದು ಜ್ಯೋರ್ತಿಲಿಂಗ' ವಿಷಯದ ಉಪನ್ಯಾಸ ನೀಡಿ, ಲಿಂಗದಿಂದ ಹೊರಹೊಮ್ಮುವ ಕಿರಣಗಳಂತೆ ನಮ್ಮ ಮಾತಿನಲ್ಲಿ ಬೆಳಕಿರಬೇಕು. ಕೇಳುಗರ ಮನಸ್ಸಿನಲ್ಲಿ ಬೆಳಕು ಮೂಡಿಸಿ, ಬದುಕಿನಲ್ಲಿ ಮಹತ್ವ ಪಡೆಯಬೇಕು. ಮಾತುಗಳಲ್ಲಿ ಮೃದುತ್ವ ಇರಬೇಕು. ಮಾತು ವ್ಯಕ್ತಿಯ ವ್ಯಕ್ತಿತ್ವವನ್ನೂ, ಭವಿಷ್ಯವನ್ನೂ ನಿರ್ಧರಿಸುವ ಶಕ್ತಿಯನ್ನು ಹೊಂದಿದೆ. ಕಾರಣ ಪ್ರತಿಯೊಬ್ಬರೂ ಮಾತನಾಡುವ ಮೊದಲು ಆಲೋಚಿಸಿ, ಮಾತನಾಡಬೇಕು ಎಂದರು.
ಸಂಜಯ ಗಾಂಧಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರಾದ ಗೌರಿಶಂಕರ ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ, ದ್ವಾದಶ ಜ್ಯೋತಿರ್ಲಿಂಗಳನ್ನು ದರ್ಶನ ಮಾಡಿದಷ್ಟು ಭಾಗ್ಯ `ಮಾತೆಂಬುದು ಜ್ಯೋತಿರ್ಲಿಂಗ'ದ ಅರ್ಥವನ್ನು ತಿಳಿಯುವುದರಿಂದ ಆಗಲಿದೆ. ಪ್ರತಿ ಮಾತಲ್ಲಿ ಒಳ್ಳೆತನವನ್ನು, ಮಾನವೀಯತೆಯನ್ನು, ಆದರ್ಶಗಳನ್ನು, ಸರಳತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಹಾನಗಲ್ಲು ಶ್ರೀಕುಮಾರೇಶ್ವರ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರಾದ ಬಿ. ಶ್ರೀಶೈಲಗೌಡ ಅವರು ಮುಖ್ಯ ಅತಿಥಿಗಳಾಗಿ, ಮಾತು ಜ್ಯೋತಿಯಂತೆ ಅನೇಕರ ಬದುಕಿನಲ್ಲಿ ಬೆಳಕನ್ನು ಮೂಡಿಸಿ, ಕತ್ತಲನ್ನು ಕಳೆಯಬೇಕು. ಮಾತು ಅನೇಕರಿಗೆ ಸ್ಫೂರ್ತಿಯನ್ನು ನೀಡಬೇಕು. ಯುವಪೀಳಿಗೆಯು ಮಾತಿನ ಮೌಲ್ಯ, ಮಾತಿನ ಮಹತ್ವ ಮತ್ತು ಮಾತಿನ ಪ್ರಭಾವಗಳ ಕುರಿತು ತಿಳಿಯಬೇಕು ಎಂದರು.
ಅಕ್ಕನ ಬಳಗದ ಸುರೇಶ ಎಸ್. ಮಲ್ಲನಗೌಡ ಅವರು ಸ್ವಾಗತ ಕೋರಿ, ಕಾರ್ಯಕ್ರಮ ನಿರ್ವಹಿಸಿದರು. ಅಕ್ಕನ ಬಳಗದ ಪಾರ್ವತಿ ಮತ್ತು ವಿನುತ ಅವರು ಪ್ರಾರ್ಥನೆ ಸಲ್ಲಿಸಿದರು. ಶಕುಂತಲ ಅವರು ವಂದನಾರ್ಪಣೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್