
ಗದಗ, 20 ಫೆಬ್ರವರಿ (ಹಿ.ಸ.)
ಆ್ಯಂಕರ್:
ಸಮಾಜಕ್ಕೆ ಅಂದ ನೀಡುವ ಸವಿತಾ ಸಮಾಜದ ಕಾಯಕಯೋಗಿಗಳು ಇಂದು ಸಾಮಾಜಿಕ ಅವಮಾನ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಕೇಶ ವಿನ್ಯಾಸದ ವೃತ್ತಿ ಮಾಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಸುಶಿಕ್ಷಿತ ಸವಿತಾ ಯುವಕರಿಗೆ ವಿವಾಹ ಸಂಬಂಧ ಸಿಗದೆ ಜೀವನ ಅತಂತ್ರವಾಗುತ್ತಿದೆ. ಇದು 21ನೇ ಶತಮಾನದ ಅತಿ ದೊಡ್ಡ ಸಾಮಾಜಿಕ ದುರಂತವಾಗಿದ್ದು, ಈ ಅನ್ಯಾಯಕ್ಕೆ ತಕ್ಷಣವೇ ಮುಕ್ತಿ ಸಿಗಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಆಗ್ರಹಿಸಿದರು.
ಇಂದು ಗದಗ ಜಿಲ್ಲಾಧಿಕಾರಿಗಳ ಪರವಾಗಿ ತಹಶೀಲ್ದಾರ್ ಸಂತೋಷ ಹಿರೇಮಠ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಸವಿಸ್ತಾರವಾದ ಮನವಿ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರವು ಕೂಡಲೇ ‘ಸರ್ಕಾರಿ ಸೌಹಾರ್ದ ಸಲೂನ್’ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಅಸ್ಪೃಶ್ಯತೆಯ ಕಳಂಕಕ್ಕೆ ಸೌಹಾರ್ದತೆಯ ಮದ್ದು:
ಜಾತಿಯ ಹೆಸರಿನಲ್ಲಿ ದಲಿತ ಬಾಂಧವರಿಗೆ ಕ್ಷೌರ ಸೇವೆ ನಿರಾಕರಿಸುವ ಅಮಾನವೀಯ ಪದ್ಧತಿ ಇಂದಿಗೂ ಮುಂದುವರೆದಿರುವುದು ವಿಷಾದಕರ. ‘ಸೌಹಾರ್ದ ಸಲೂನ್’ಗಳಲ್ಲಿ ಎಲ್ಲಾ ವರ್ಗದವರಿಗೂ ಸಮಾನ ಗೌರವದ ಸೇವೆ ಸಿಗುವ ಮೂಲಕ ಇದು ಜಾತಿ ವ್ಯವಸ್ಥೆ ವಿರುದ್ಧದ ಸಮಾನತೆಯ ಕೇಂದ್ರವಾಗಲಿದೆ ಎಂದು ಹೇಳಿದರು.
ಸವಿತಾ ಯುವಕರ ವಿವಾಹ ಭಾಗ್ಯಕ್ಕೆ ಸರ್ಕಾರಿ ಮಾನ್ಯತೆ ಅಗತ್ಯ:
ಸರ್ಕಾರಿ ನೌಕರಿಯ ಮಾನ್ಯತೆ ಸಿಕ್ಕರೆ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ. ಸರ್ಕಾರ ನಮ್ಮ ಕಾಯಕಕ್ಕೆ ‘ಸರ್ಕಾರಿ ಉದ್ಯೋಗ’ದ ಮುದ್ರೆ ಒತ್ತದಿದ್ದರೆ ಲಕ್ಷಾಂತರ ಯುವಕರ ಬದುಕು ಬರಡಾಗಲಿದೆ ಎಂದು ಅವರು ಎಚ್ಚರಿಸಿದರು.
ವಿದ್ಯಾರ್ಥಿ–ಹಿರಿಯರಿಗೆ ‘ಆರನೇ ಗ್ಯಾರಂಟಿ’ ಬೇಡಿಕೆ:
ಬಡ ಶಾಲಾ ಮಕ್ಕಳಿಗೆ ಹಾಗೂ ಅಸಹಾಯಕ ಹಿರಿಯ ನಾಗರಿಕರಿಗೆ ಸರ್ಕಾರಿ ಸೌಹಾರ್ದ ಸಲೂನ್‌ಗಳಲ್ಲಿ ಉಚಿತ ಕ್ಷೌರ ಸೇವೆ ನೀಡುವ ಮೂಲಕ ಇದನ್ನು ಸರ್ಕಾರದ ‘ಆರನೇ ಗ್ಯಾರಂಟಿ’ಯಾಗಿ ಘೋಷಿಸಬೇಕು ಎಂದು ಮನವಿ ಮಾಡಿದರು.
ಕಾರ್ಪೊರೇಟ್ ಸಲೂನ್‌ಗಳ ವಿರುದ್ಧ ಆಕ್ರೋಶ:
ಲಕ್ಷಾಂತರ ರೂಪಾಯಿ ವಸೂಲಿ ಮಾಡುವ ಕಾರ್ಪೊರೇಟ್ ಸಲೂನ್‌ಗಳ ನಡುವೆ ಕುಲಕಸುಬು ನಂಬಿದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರದಿಂದ ಆಧುನಿಕ ಸೌಲಭ್ಯ ಹಾಗೂ ಆರ್ಥಿಕ ಭದ್ರತೆ ಸಿಗದಿದ್ದರೆ ರಾಜ್ಯಾದ್ಯಂತ ಕತ್ತರಿ–ಬಾಚಣಿಗೆ ಹಿಡಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಾದ ಹನುಮಂತಪ್ಪ ರಾಂಪೂರ, ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷ ಪರಶುರಾಮ ಎನ್. ಕೋಟೆಕಲ್ಲ, ಶ್ರೀ ಸಂತ ಸೇನಾ ಮಹಾರಾಜ ನಾಭಿಕ್ ಮರಾಠ (ಸವಿತಾ) ಸಮಾಜದ ಅಧ್ಯಕ್ಷ ವಿಕಾಸ ಕ್ಷೀರಸಾಗರ, ಜಿಲ್ಲಾ ಖಜಾಂಚಿ ಅರೋಣ ರಾಂಪುರ, ಮುಖಂಡ ಶ್ರೀನಿವಾಸ ಕೋಟೆಕಲ್ಲ ಸೇರಿದಂತೆ ಸಮಾಜದ ಪದಾಧಿಕಾರಿಗಳು ಮತ್ತು ಕ್ರಾಂತಿಕಾರಿ ಯುವಕರು ಉಪಸ್ಥಿತರಿದ್ದು ತಮ್ಮ ನ್ಯಾಯಯುತ ಬೇಡಿಕೆಗಳಿಗೆ ಧ್ವನಿ ಎತ್ತಿದರು.
ಉತ್ತರ ಕರ್ನಾಟಕದ ಸಾಂಸ್ಕೃತಿಕ ಕೇಂದ್ರ ಗದಗಿನಿಂದ ಹೋರಾಟದ ಮೊದಲ ರಣಕಹಳೆ ಮೊಳಗಿಸಿದ್ದು, ಸವಿತಾ ಸಮಾಜದ ಯುವಕರ ಕಣ್ಣೀರನ್ನು ಸರ್ಕಾರ ಇನ್ನು ಮುಂದೆ ನಿರ್ಲಕ್ಷಿಸಬಾರದು. ‘ಸರ್ಕಾರಿ ಸೌಹಾರ್ದ ಸಲೂನ್’ ಯೋಜನೆಗೆ ಗದಗ ಜಿಲ್ಲೆಯಿಂದಲೇ ಚಾಲನೆ ಸಿಗಬೇಕು ಎಂಬುದು ಸಭೆಯ ಒಕ್ಕೊರಲಿನ ಆಗ್ರಹವಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / lalita MP