ಮಹನೀಯರ ಜಯಂತಿ ಅದ್ದೂರಿ ಆಚರಣೆಗೆ ಕ್ರಮ
ಬಳ್ಳಾರಿ, 20 ಫೆಬ್ರವರಿ (ಹಿ.ಸ.): ಆ್ಯಂಕರ್ : ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಮಾ.01 ರಂದು ಶ್ರೀ ರೇಣುಕಾಚಾರ್ಯ ಜಯಂತಿ, ಮಾ.03 ರಂದು ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝ
ಮಹನೀಯರ ಜಯಂತಿ ಅದ್ದೂರಿ ಆಚರಣೆಗೆ ಕ್ರಮ


ಬಳ್ಳಾರಿ, 20 ಫೆಬ್ರವರಿ (ಹಿ.ಸ.):

ಆ್ಯಂಕರ್ : ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಮಾ.01 ರಂದು ಶ್ರೀ ರೇಣುಕಾಚಾರ್ಯ ಜಯಂತಿ, ಮಾ.03 ರಂದು ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ, ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್ ಅವರು ಹೇಳಿದರು.

ನಗರದ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹನೀಯರ ಜಯಂತಿ ಕಾರ್ಯಕ್ರಮ ಆಚರಣೆ ಕುರಿತು ಅಧಿಕಾರಿಗಳು, ಸಮುದಾಯದ ಮುಖಂಡರೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಸಭಾಂಗಣದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಬೇಕು. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಾ.01 ರಂದು ಶ್ರೀ ರೇಣುಕಾಚಾರ್ಯ ಜಯಂತಿ ಅಂಗವಾಗಿ ಸಂಜೆ 04 ಗಂಟೆಗೆ ಮೆರವಣಿಗೆ, 06 ಗಂಟೆಗೆ ವೇದಿಕೆ ಕಾರ್ಯಕ್ರಮ ಏರ್ಪಡಿಸಬೇಕು. ಅದೇರೀತಿಯಾಗಿ ಮಾ.03 ರಂದು ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮ ನಗರದ ಬಲಿಜ ಭವನದಲ್ಲಿ ಆಯೋಜಿಸಲಾಗುವುದು ಎಂದರು.

ಶಿವಶರಣರು ಬಿತ್ತಿದ ಸಾಮಾಜಿಕ ಮೌಲ್ಯಗಳನ್ನು ಶಾಲಾ ಕಾಲೇಜು ಮಕ್ಕಳಿಗೂ ಅರಿವು ಮೂಡಿಸುವ ಅಗತ್ಯವಿದೆ. ಶರಣರು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾದವರಲ್ಲ; ಅವರ ಜೀವನ, ಚಿಂತನೆ, ದಾರ್ಶನಿಕ ಬದುಕುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಲು ಸರ್ಕಾರವು ಜಯಂತಿ ಕಾರ್ಯಕ್ರಮ ಆಚರಿಸುತ್ತಿದೆ ಎಂದು ತಿಳಿಸಿದರು.

ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಸೂಚನೆಗಳಿದ್ದು, ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯಲೇ ಬೇಕು. ಬೈಕ್ ರ್ಯಾಲಿ, ಡಿಜೆ ಧ್ವನಿವರ್ಧಕ ಬಳಕೆ, ಪಟಾಕಿ ಸಿಡಿಸಲು ಅವಕಾಶವಿಲ್ಲ. ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭಕ್ತಿ-ಭಾವದಿಂದ ಮಹನೀಯರ ಜಯಂತಿ ಆಚರಿಸೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರಿಗೆ, ಸಂಘ-ಸಂಸ್ಥೆಗಳಿಗೆ ವಿತರಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮಹನೀಯರ ಆಚಾರ-ವಿಚಾರಗಳನ್ನು ಪರಿಣಿತರಿಂದ ವಿಶೇಷ ಉಪನ್ಯಾಸ ಮೂಲಕ ತಲುಪಿಸಲು ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಬೇಕು. ವಚನ ಸಂಗೀತ ಗಾಯನ ಏರ್ಪಡಿಸಬೇಕು ಎಂದರು.

ಜಯಂತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದರು. ಇದೇ ವೇಳೆ ಸಮಾಜದ ಮುಖಂಡರು ಜಯಂತಿ ಕಾರ್ಯಕ್ರಮ ಯಶಸ್ವಿಗೆ ತಮ್ಮ ಸಲಹೆ-ಸೂಚನೆ ನೀಡಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಡಿಡಿಪಿಐ ಕಚೇರಿಯ ವೇದಾವತಿ ಸೇರಿದಂತೆ ಮಹಾನಗರ ಪಾಲಿಕೆ, ಪೊಲೀಸ್ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande