
ಬೆಂಗಳೂರು, 20 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಸರ್ವಜ್ಞನೆಂದರೆ ಎಲ್ಲವನ್ನು ಬಲ್ಲವನೆಂಬ ಅಹಂಕಾರವಲ್ಲ; ‘ಸರ್ವರೊಳು ಒಂದೊಂದು ನುಡಿ ಕಲಿತವನು’ ಎಂಬ ಅರಿವಿನ ವಿಶಾಲತೆಯಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡದ ಪ್ರಖ್ಯಾತ ವಚನಕಾರ ಮತ್ತು ದಾರ್ಶನಿಕ ಕವಿ ಸರ್ವಜ್ಞ ಅವರ ಜಯಂತಿಯ ಅಂಗವಾಗಿ ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಮುಖ್ಯಮಂತ್ರಿ, ವಿಶ್ವಬಾಂಧವ್ಯದ ತತ್ವವನ್ನು ಅರಿತು ಕಾವ್ಯ ರೂಪದಲ್ಲಿ ಜನಮನಗಳಿಗೆ ತಲುಪಿಸಿದ ಅಪರೂಪದ ಕವಿಗಳಲ್ಲಿ ಸರ್ವಜ್ಞ ಪ್ರಮುಖರು ಎಂದು ತಿಳಿಸಿದ್ದಾರೆ.
ಸರ್ವಜ್ಞರು ತಮ್ಮ ವಚನಗಳ ಮೂಲಕ ಸರಳತೆ, ಸಜ್ಜನಿಕೆ, ಸಮಾನತೆ ಮತ್ತು ನೈತಿಕ ಮೌಲ್ಯಗಳನ್ನು ಸಾರಿದರು. ಸಮಾಜದ ಕುಂದುಕೊರತೆಗಳನ್ನು ಸರಳ ಶೈಲಿಯಲ್ಲಿ ಎತ್ತಿಹಿಡಿದು, ಸುಧಾರಣೆಯ ಹಾದಿ ತೋರಿದ ಚಿಂತಕರಾಗಿ ಅವರು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತಾರೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸರ್ವಜ್ಞರ ಚಿಂತನೆಗಳು ಇಂದಿಗೂ ಸಮಕಾಲೀನವಾಗಿದ್ದು, ಸಾಮಾಜಿಕ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳ ಬಲವರ್ಧನೆಗೆ ಪ್ರೇರಣೆಯಾಗಿವೆ. ಅವರ ಜಯಂತಿಯ ದಿನ, ಈ ಮಹಾನ್ ಕವಿ-ದಾರ್ಶನಿಕರಿಗೆ ನಮನ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa