ಆಭರಣ ಹಾಗೂ ಮೋಟಾರ್ ಸೈಕಲ್ ಕಳ್ಳ ಬಂಧನ
ಧಾರವಾಡ, 20 ಫೆಬ್ರವರಿ (ಹಿ.ಸ.): ಆ್ಯಂಕರ್:ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆಭರಣ ಮತ್ತು ಮೋಟಾರ್ ಸೈಕಲ್ ಕಳ್ಳನನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಫೆ.14ರಿಂದ 15ರ ನಡುವೆ ಚಿ
Arrest


ಧಾರವಾಡ, 20 ಫೆಬ್ರವರಿ (ಹಿ.ಸ.):

ಆ್ಯಂಕರ್:ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆಭರಣ ಮತ್ತು ಮೋಟಾರ್ ಸೈಕಲ್ ಕಳ್ಳನನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ಫೆ.14ರಿಂದ 15ರ ನಡುವೆ ಚಿಲಕವಾಡ ಗ್ರಾಮದ ಸುರೇಶ್ ಭೀಮರಾಯಪ್ಪ ಕೋನರಡ್ಡಿ ಅವರ ಮನೆಯಲ್ಲಿ ಬಾಗಿಲು ಮುರಿದು ಟ್ರೆಜರಿಯಲ್ಲಿ ಇಟ್ಟಿದ್ದ ಬಂಗಾರ-ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಬಿಎನ್‌ಎಸ್ ಕಲಂ 305, 331(3), 331(4) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ವೇಳೆ 60-65 ವರ್ಷದ ವ್ಯಕ್ತಿಯ ಚಲನವಲನಗಳು ಪತ್ತೆಯಾಗಿದ್ದು, ಚಹರೆ ಆಧಾರದ ಮೇಲೆ ನರೆಗಲ್ ನಿವಾಸಿ ಜೀವಪ್ಪ ಉರ್ಫ್ ಜಿವ್ಯಾ ದ್ಯಾಮಣ್ಣ ದೊಡಮನಿ (69) ಎಂಬಾತನ ಮೇಲೆ ಅನುಮಾನ ವ್ಯಕ್ತವಾಯಿತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನಕವಾಡ ಹಾಗೂ ನಲವಡಿ ಗ್ರಾಮಗಳಲ್ಲಿ ಮೋಟಾರ್ ಸೈಕಲ್ ಕಳ್ಳತನ ಮಾಡಿರುವುದನ್ನೂ ಒಪ್ಪಿಕೊಂಡಿದ್ದಾನೆ.

ಪೊಲೀಸರು ಆರೋಪಿಯಿಂದ ಒಟ್ಟು ಸುಮಾರು ರೂ. 2.5 ಲಕ್ಷ ಮೌಲ್ಯದ ಬಂಗಾರದ ಬಟನ್, ಟಾಪ್ಸ್, ಉಂಗುರ, ಬೆಳ್ಳಿಯ ಹಾಲಗಡಗ, ಕೈಕಡಗ, ಕಾಲಚೈನ್ ಹಾಗೂ ಉಡದಾರ ಸೇರಿದಂತೆ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಎರಡು ಮೋಟಾರ್ ಸೈಕಲ್‌ಗಳನ್ನೂ ಜಪ್ತ ಮಾಡಿದ್ದಾರೆ.

ಪ್ರಕರಣದ ತನಿಖೆ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಅವರ ಮಾರ್ಗದರ್ಶನದಲ್ಲಿ ನವಲಗುಂದ ಸಿಪಿಐ ರವಿಕುಮಾರ ಕಪ್ಪತನವರ, ಪಿಎಸ್‌ಐ ಜನಾರ್ಧನ ಬಿ. ಹಾಗೂ ಸಿಬ್ಬಂದಿ ತಂಡದಿಂದ ಯಶಸ್ವಿಯಾಗಿ ನಡೆದಿದೆ. ಕಳ್ಳತನವಾದ ಸ್ವತ್ತು ಶೀಘ್ರದಲ್ಲೇ ಪತ್ತೆಹಚ್ಚಿದ ಸಿಬ್ಬಂದಿ ಕಾರ್ಯಕ್ಕೆ ಪೋಲಿಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande