
ಹಾಸನ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಇಂದಿನ ಯುವ ಜನತೆ ಮೇಲೆ ಪೋಷಕರ ಅತಿಯಾದ ನಿರೀಕ್ಷೆಗಳು ಹೆಚ್ಚುತ್ತಿರುವುದರಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ತುತ್ತಾಗುತ್ತಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಅಭಿಪ್ರಾಯಪಟ್ಟರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಹಾಸನ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಸನ ಇವರ ಸಹಯೋಗದಲ್ಲಿ ಸಂತ ಜೋಸೆಫ್ ಶಾಲೆಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳು ಮೊದಲ ರ‍್ಯಾಂಕ್ ಗಳಿಸಬೇಕು, ವೈದ್ಯರು ಅಥವಾ ಇಂಜಿನಿಯರ್‌ಗಳು ಆಗಬೇಕು ಎಂಬ ಬಯಕೆಯಿಂದ ಹೆಚ್ಚಿನ ಓದು ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಕ್ಕಳು ನಕಾರಾತ್ಮಕ ಚಿಂತನೆಗಳಿಗೆ ಒಳಗಾಗಿ ದುಷ್ಚಟಗಳತ್ತ ಸಾಗುವ ಸಾಧ್ಯತೆ ಹೆಚ್ಚುತ್ತಿದೆ ಎಂದು ಅವರು ಎಚ್ಚರಿಸಿದರು. ಮಕ್ಕಳಿಗೆ ಸಹಜವಾಗಿ ಕಲಿಯಲು ಮತ್ತು ಬಾಲ್ಯವನ್ನು ಆನಂದಿಸಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಬಿ.ಕೆ., ಹದಿಹರೆಯವು ಮಕ್ಕಳ ಜೀವನದ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಘಟ್ಟವಾಗಿದೆ ಎಂದು ತಿಳಿಸಿದರು. ಈ ಅವಧಿಯಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ, ಭಾಷಾ ಮತ್ತು ಸಾಮಾಜಿಕ ಬೆಳವಣಿಗೆಗಳು ನಡೆಯುತ್ತವೆ. ದೇಹದಲ್ಲಿ ಹಾರ್ಮೋನ್‌ಗಳ ಉತ್ಪತ್ತಿಯಿಂದ ಉಂಟಾಗುವ ಬದಲಾವಣೆಗಳನ್ನು ಸರಿಯಾದ ಮಾರ್ಗದರ್ಶನದ ಮೂಲಕ ಅರ್ಥಮಾಡಿಸಿಕೊಡುವುದು ಅಗತ್ಯ ಎಂದರು.
ಹದಿಹರೆಯದ ಸಹಜ ಆಕರ್ಷಣೆಯನ್ನು ಪ್ರೀತಿ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವ ಕೆಲವರು ಮೊಬೈಲ್ ಬಳಕೆಯಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದು, ಶಾಲೆ ಬಿಟ್ಟು ತಿರುಗುವಂತಹ ಪ್ರವೃತ್ತಿಗಳು ಹೆಚ್ಚುತ್ತಿರುವುದಾಗಿ ಅವರು ಹೇಳಿದರು. ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳ ಪ್ರಭಾವದಿಂದ ಮಕ್ಕಳು ಬೇಗನೆ ನಕಾರಾತ್ಮಕ ಅಂಶಗಳನ್ನು ಅನುಕರಿಸುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದಲ್ಲಿ ಗಂಭೀರ ಪರಿಣಾಮಗಳು ಎದುರಾಗಬಹುದು ಎಂದು ಎಚ್ಚರಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿಲೀಪ್ ಕೆ.ಜಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಕಾಂತರಾಜು ರಕ್ಷಣಾಧಿಕಾರಿ ತರಬೇತಿ ನೀಡಿದರು. ಆರಕ್ಷಕ ನಿರೀಕ್ಷಕ ಸ್ವಾಮಿನಾಥ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa