
ಬಳ್ಳಾರಿ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯ 11 ಎಕರೆ 5 ಸೆಂಟ್ಸ್ ಭೂಮಿಯನ್ನು ಅಕ್ರಮವಾಗಿ ಫಾರಂ 2 ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಲಕ್ಷ ರೂಪಾಯಿ ಲಂಚವನ್ನು ಎ. ಪ್ರಭಾವತಿ ಅವರು ಪಾವತಿ ಮಾಡಿದ್ದು, ಈ ಅಕ್ರಮದಲ್ಲಿ ಪಾಲ್ಗೊಂಡಿದ್ದ ಆರು ಸಿಬ್ಬಂದಿಗಳು ಮತ್ತು ಲಂಚ ಪಾವತಿಸಿದವರ ವಿರುದ್ಧ ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗಳಾದ ಕೇಸ್ ವರ್ಕರ್ ಶ್ರೀಕಾಂತ್, ಕಂದಾಯ ಅಧಿಕಾರಿಗಳಾದ ಮನೋಹರ್, ನರೇಶ್ ಕುಮಾರ್, ಲಕ್ಷ್ಮೀನಾರಾಯಣ ಮತ್ತು ಹೊರಗುತ್ತಿಗೆ ಕಂಪ್ಯೂಟರ್ ಆಪರೇಟರ್ ಸ್ನೇಹ ಅವರ ವಿರುದ್ಧ ಬಿಎನ್‍ಎಸ್ ಸೆಕ್ಷನ್ 318(4), 336(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೇ, 32 ಲಕ್ಷ ರೂಪಾಯಿಗಳ ದೊಡ್ಡ ಮೊತ್ತವನ್ನು ನಗದು ರೂಪದಲ್ಲಿ ವ್ಯವಹರಿಸಿದ ಅಲ್ಲದೇ, ಲಂಚವನ್ನು ನೀಡಿದ ಕಾರಣಕ್ಕಾಗಿ ಹಣ ಪಾವತಿಸಿ ಅಕ್ರಮವಾಗಿ ಫಾರಂ 2 ಮಾಡಿಕೊಂಡಿರುವ ಎ. ಪ್ರಭಾವತಿ ಸೇರಿ ನಾಲ್ವರ ವಿರುದ್ಧ ಕೌಲ್‍ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದೆ.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು, ಅಕ್ರಮವಾಗಿ ಫಾರಂ 2 ಪಡೆದಿರುವ 11 ಎಕರೆ 5 ಸೆಂಟ್ಸ್ ಭೂಮಿಯ ಸರ್ವೇ ಮತ್ತು ದಾಖಲೆಗಳ ಪರಿಶೀಲನೆಗಾಗಿ ಶುಕ್ರವಾರ ಸಭೆ ನಡೆಯಲಿದೆ. ಈ ಸಭೆಯಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಗಡಿಗಳ ಕುರಿತು ಅಳತೆಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಪಾಲಿಕೆಯ ಸಿಬ್ಬಂದಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಫಾರಂ 2 ರದ್ದಾಗಿದೆ. ತನಿಖೆ ನಡೆದಿದೆ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ ವಿರೋಧಪಕ್ಷದ ನಾಯಕ, ಬಿಜೆಪಿಯ ಮುಖಂಡ ಶ್ರೀನಿವಾಸ ಮೋತ್ಕರ್ ಅವರು ಈ ಅಕ್ರಮ ಫಾರಂ 2 ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ನಂತರ, ಈ ಬೆಳವಣಿಗೆಗಳಾಗಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್