ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಡಗೂರು ಬಳಿ ಗುರುವಾರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.


ಕೋಲಾರ, ೧೯ :

ಆ್ಯಂಕರ್ : ಹುತ್ತೂರು ಹೋಬಳಿಭಾಗದ ನಿವೇಶನ ರಹಿತರಿಗೆ ಆರು ತಿಂಗಳಲ್ಲಿ ೧,೩೦೦ ನಿವೇಶನ ವಿತರಿಸಲಾಗುವುದು ಪ್ರತಿ ಪಂಚಾಯಿತಿಗೆ ೩೦೦ ನಿವೇಶನ ಕೊಡುತ್ತೇನೆ. ಯಾರೂ ಸೂರು ವಂಚಿತರಾಗಬಾರದು ಎಂದು ಬಂಗಾರಪೇಟೆ ಶಾಸಕ, ಕೆ.ಯು.ಐ.ಡಿ.ಎಫ್.ಸಿ ಅಧ್ಯಕ್ಷ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು.

ತಾಲ್ಲೂಕಿನ ಹುತ್ತೂರು ಹೋಬಳಿಯ ವಡಗೂರು ಸಂತೆ ಮೈದಾನದಲ್ಲಿ ಗುರುವಾರ ಬಂಗಾರಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ೩೨ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ಬೃಹತ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹುತ್ತೂರು ಹೋಬಳಿಯ ಸಮಗ್ರ ಅಭಿವೃದ್ಧಿ ಈ ಕಾಮಗಾರಿಗಳ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ೧೦ ಕೋಟಿ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು. ಗೆದ್ದ ಮೇಲೆ ಕ್ಷೇತ್ರದ ಋಣ ತೀರಿಸುವುದು ನಮ್ಮ ಜವಾಬ್ದಾರಿ. ಈ ಭಾಗದ ಅಭಿವೃದ್ಧಿಗೆ ಮುಖಂಡರು ಮನವಿ ಮಾಡಿದ್ದರು. ಎಂ.ನಾರಾಯಣಸ್ವಾಮಿ ಬಂದ ಮೇಲೆ ನನಗೆ ಮತ್ತಷ್ಟು ಶಕ್ತಿ ಬಂದಿದೆ. ೩೨ ಕೋಟಿ ಅನುದಾನದಲ್ಲಿ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಾವಿರಾರು ಜನ ಬಂದಿರುವುದು ಖುಷಿ ತಂದಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಮೂಲಕ ಈ ಭಾಗದ ನಿಮ್ಮ ನಾಯಕತ್ವ ಗಟ್ಟಿಗೊಳ್ಳುತ್ತದೆ. ಜನರ ಮಧ್ಯೆ ನಿಂತು ಕಷ್ಟಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುವವರೇ ನಿಜವಾದ ನಾಯಕರು. ವೇದಿಕೆಯಲ್ಲಿ ಬಂದು ಭಾಷಣ ಮಾಡುವವರು ನಾಯಕರಲ್ಲ ೧೩ ವರ್ಷದಲ್ಲಿ ನೀಡಿದ ಮಾತಿನಂತೆ ನಾನು ನಡೆದು ಕೊಂಡಿದ್ದೇನೆ. ಹಿಂದೆ ಗ್ರಾಮದಲ್ಲಿ ನೀರಿಗೆ ಎಷ್ಟು ಕಷ್ಟ ಇತ್ತು. ಈಗ ಹೇಗಿದೆ? ಎಲ್ಲಾ ಗ್ರಾಮಗಳಲ್ಲಿ ಶುದ್ಧೀಕರಣ ಘಟಕ ಹಾಕಿಸಿಕೊಟ್ಟಿದ್ದೇನೆ. ಪ್ರತಿ ಗ್ರಾಮಕ್ಕೂ ಹೈಮಾಸ್ಟ್ ದೀಪ ಅಳವಡಿಸಿದ್ದೇನೆ ಎಂದರು.

ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಭಾಗ್ಯ ನೀಡಿದ್ದರು. ಈ ಅವಧಿಯಲ್ಲಿ ಗ್ಯಾರಂಟಿ ನೀಡಿದ್ದಾರೆ. ಗ್ರಾಮಗಳ ಅಭಿವೃದ್ಧಿಗೆ ನಾವು ಬದ್ಧ. ಈ ಹೋಬಳಿ ಅಭಿವೃದ್ಧಿ ನನ್ನ ಗುರಿ. ಗ್ರಾಮದ ಪ್ರತಿ ನಾಯಕರೂ ನನಗೆ ನಾಯಕರೇ ಎಂದು ತಿಳಿಸಿದರು.

ಯಾರೇ ಟೀಕಿಸಿದರೆ ನನಗೆ ಒಳ್ಳೆಯದು. ಟೀಕಾಕಾರರು ಇರಬೇಕು. ವಿರೋಧ ಪಕ್ಷಗಳ ಟೀಕೆಯನ್ನು ಸಲಹೆಯಂತೆ ಸ್ವೀಕರಿಸುತ್ತೇನೆ. ಹೆಚ್ಚು ಪ್ರಸಿದ್ಧಿ ಪಡೆದಂತೆ ಹೆಚ್ಚು ಶತ್ರುಗಳು ಸಹಜ. ಆನೆ ನಡೆಯುವಾಗ ನಾಯಿ ಬೊಗಳುತ್ತಾ ಇರುತ್ತದೆ ಎಂದು ಅವರು ಟೀಕಾಕಾರಿಗೆ ತಿರುಗೇಟು ನೀಡಿದರು.

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ಶಾಸಕರು ಅತಿ ಹೆಚ್ಚು ಅನುದಾನ ತಂದಿದ್ದಾರೆ. ನಾವು ಕೇಳಿದ ಎಲ್ಲಾ ಕಾಮಗಾರಿಗೆ ಮುಂದಾಗಿದ್ದಾರೆ. ನಾನು ಈ ಕ್ಷೇತ್ರದಲ್ಲಿ ಶಾಸಕನಾಗಿದ್ದೆ. ಆಗಿನ ಸಮಯಕ್ಕಿಂತ ಹೆಚ್ಚು ಅನುದಾನ ತಂದಿದ್ದಾರೆ. ಮುಂದೆ ತಾಲ್ಲೂಕು, ಜಿಲ್ಲಾ,ಗ್ರಾಮ ಪಂಚಾಯಿತಿ ಬರುತ್ತಿದೆ. ಕೆಲಸ ಮಾಡಿದರೆ ತಾನೇ ಮತ ಬೀಳುವುದು. ಈ ನಿಟ್ಟಿನಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದರು.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಗಳ ವರದಿ ಬಂದಿತ್ತು. ಆದರೆ, ಬಿಜೆಪಿಯ ವರಿಷ್ಠರು ಚುನಾವಣಾ ವೆಚ್ಚ ಕೊಡಲಿಲ್ಲ. ಹಂಚಲು ಹಣ ನನ್ನ ಬಳಿ ಇರಲಿಲ್ಲ. ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಮೋಸ ಮಾಡಿದರು. ಒಂದು ಬೂತ್ ಗೆ ಹಂಚಲು ₹ ೨ ಲಕ್ಷ ಕೂಡ ಇರಲಿಲ್ಲ. ಬಿಜೆಪಿ ಮುಖಂಡರು ಕೈ ಕೊಟ್ಟರು. ಜೊತೆಗೆ ಹಣ ತೆಗೆದುಕೊಂಡು ಮೋಸ ಮಾಡಿದರು ಎಂಬುದಾಗಿ ನನ್ನ ವಿರುದ್ಧವೇ ಅಪಪ್ರಚಾರ ಮಾಡಿದರು. ನನ್ನ ಬೀಜ ಹೊಡೆಯುವ ಕೆಲಸ ಮಾಡಿದರು. ಹಾಗಾಗಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದೆ. ನನ್ನ ನಂಬಿದವರನ್ನು ಕೈಬಿಡಬಾರದು ಎಂದು ಈ ನಿರ್ಧಾರ ಕೈಗೊಂಡೆ ಎಂದು ಹೇಳಿದರು.

ಹುತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ ಮಾತನಾಡಿ, ಹುತ್ತೂರು ಹೋಬಳಿಯಲ್ಲಿ ಶಾಸಕರು ಶಕ್ತಿಮೀರಿ ಅನುದಾನ ತಂದು ಅಭಿವೃದ್ಧಿ ಕೈಗೊಂಡಿದ್ದಾರೆ. ಈ ಹಿಂದೆ ಹೋಬಳಿಗೆ ಯಾವ ಶಾಸಕರೂ ಇಷ್ಟು ಅನುದಾನ ತಂದಿಲ್ಲ. ಡಾಂಬರೀಕರಣಕ್ಕೆ ಹೆಚ್ಚು ಅನುದಾನ ನೀಡಿ ಕಾಮಗಾರಿ ಕೈಗೊಳ್ಳಬೇಕು ಎಂದರು.

ಬAಗಾರಪೇಟೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬಂಗಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಮುನಿರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಘುನಾಥ್, ಹರಟಿ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಂಡಹಳ್ಳಿ ನಾಗಭೂಷಣ ಬಾಬು, ಮುಖಂಡರಾದ ಹರಳಕುಂಟೆ ವೆಂಕಟೇಶ್, ಹೊಳಲಿ ಚಲಪತಿ, ಮೇಡತಂಬಿಹಳ್ಳಿ ರಮೇಶ್, ಬಿಎಂಟಿಸಿ ಬೆಳಗಾನಹಳ್ಳಿ ಮಂಜುನಾಥ್, ಮುರಳಿಗೌಡ, ತಂಬಹಳ್ಳಿ ಮುನಿಯಪ್ಪ, ಪ್ರತಾಪ್, ಜುಮ್ನಹಳ್ಳಿ ನಾರಾಯಣಸ್ವಾಮಿ ಯರಂಘಟ್ಟ ಮುನಿರಾಜು,, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ನಿರ್ಮಿತಿ ಕೇಂದ್ರದ ಅಶ್ವಿನ್ ಇದ್ದರು.

ಚಿತ್ರ : ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಡಗೂರು ಬಳಿ ಗುರುವಾರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande