ಕೊಪ್ಪಳ : ಫೆ.20 ರಂದು ಕೆರೆಹಳ್ಳಿ ಲಕ್ಕಮ್ಮದೇವಿ ಜಾತ್ರೋತ್ಸವ
ಕೊಪ್ಪಳ, 19 ಫೆಬ್ರವರಿ (ಹಿ.ಸ.) : ಆ್ಯಂಕರ್ : ವಿಜಯನಗರ ಕಾಲಕ್ಕೂ ಮುನ್ನ ದಿಂದಿರಿಗಿ ಪಟ್ಟಣವೆಂದೇ ಪ್ರಚಲಿತದಲ್ಲಿದ್ದ ಐತಿಹಾಸಿಕ ಕೆರೆಹಳ್ಳಿ ಗ್ರಾಮದ ಅಧಿದೇವತೆ ಶ್ರೀ ಲಕ್ಕಮ್ಮದೇವಿಯ 9ನೇ ವರ್ಷದ ಜಾತ್ರಾ ಮಹೋತ್ಸವ ಇದೇ ಫೆ.20ರಂದು ವಿಜೃಂಭಣೆಯಿಂದ ಆಚರಣೆಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ ನ
ಕೊಪ್ಪಳ:  ಫೆ.20 ರಂದು ಕೆರೆಹಳ್ಳಿ ಲಕ್ಕಮ್ಮದೇವಿ ಜಾತ್ರೋತ್ಸವ


ಕೊಪ್ಪಳ, 19 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಿಜಯನಗರ ಕಾಲಕ್ಕೂ ಮುನ್ನ ದಿಂದಿರಿಗಿ ಪಟ್ಟಣವೆಂದೇ ಪ್ರಚಲಿತದಲ್ಲಿದ್ದ ಐತಿಹಾಸಿಕ ಕೆರೆಹಳ್ಳಿ ಗ್ರಾಮದ ಅಧಿದೇವತೆ ಶ್ರೀ ಲಕ್ಕಮ್ಮದೇವಿಯ 9ನೇ ವರ್ಷದ ಜಾತ್ರಾ ಮಹೋತ್ಸವ ಇದೇ ಫೆ.20ರಂದು ವಿಜೃಂಭಣೆಯಿಂದ ಆಚರಣೆಗೊಳ್ಳಲಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ಪವಾಡಗಳ ಮಳೆಯನ್ನೇ ಸುರಿಸಿದ್ದ ಶ್ರೀ ಅನ್ನಪೂರ್ಣೇಶ್ವರಿ (ಲಕ್ಕಮ್ಮ) ದೇವಿಯ ಮಹಿಮೆ ನಾಡಿನಾದ್ಯಂತ ಗಮನ ಸೆಳೆದಿತ್ತು. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಎಲ್ಲ ಸುದ್ದಿವಾಹಿನಿಗಳು ಮತ್ತು ಪತ್ರಿಕಾ ಮಾಧ್ಯಮಗಳು ಲಕ್ಕಮ್ಮದೇವಿಯ ಐತಿಹ್ಯದ ಕುರಿತು ಅಚ್ಚರಿಗೊಂಡು, ಪುಂಖಾನುಪುಂಖವಾಗಿ ಸುದ್ದಿಗಳನ್ನು ಬಿತ್ತರಿಸಿದ್ದವು. ಅಂತಹ ಹಿರಿಮೆ ಹೊಂದಿರುವ ಕೆರೆಹಳ್ಳಿ ಗ್ರಾಮದ ಅಧಿದೇವತೆಯ ಜಾತ್ರಾ ಮಹೋತ್ಸವ ಸಡಗರ, ಸಂಭ್ರಮ ಹಾಗೂ ಶ್ರದ್ಧೆಗಳಿಂದ ಆಚರಿಸಲು ಗ್ರಾಮಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.

ಕೆರೆಹಳ್ಳಿ ಗ್ರಾಮದ ಶ್ರೀ ಅನ್ನಪೂರ್ಣೇಶ್ವರಿ ಲಕ್ಕಮ್ಮ ದೇವಿ ದಾಸೋಹ ಸೇವಾ ಟ್ರಸ್ಟ್(ರಿ) ವತಿಯಿಂದ ಇದೇ ಶ್ರೀ ಮನೃಪ ಶಾಲಿವಾಹನ ಶ್ರೀ ಶಕೆ 1947ನೇ ವಿಶ್ವಾವಸು ನಾಮ ಸಂವತ್ಸರ ಪಾಲ್ಗುಣ ಶುದ್ಧ ತೃತೀಯ ಫೆ.20ರ ಶುಕ್ರವಾರ ಬೆಳಿಗ್ಗೆ 6.45 ರಿಂಧ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ (ಶ್ರೀ ಲಕ್ಕಮ್ಮದೇವಿ) ಅಭಿಷೇಕ, ನಂತರ ಬಾಜಾ, ಭಜಂತ್ರಿ, ಡೊಳ್ಳು ವಾದ್ಯಗಳೊಂದಿಗೆ ಕುಂಭ ಕಳಸಗಳ ಮೆರವಣಿಗೆಯೊಂದಿಗೆ ಗಂಗೆ ಸ್ಥಳಕ್ಕೆ ಹೋಗುವ ಕಾರ್ಯಕ್ರಮ ನಡೆಯಲಿದೆ.

ಕೆರೆಹಳ್ಳಿ, ಬೂದಗುಂಪಾ, ಶಹಪುರ, ಅಗಳಕೇರಿ, ಶಿವಪುರ, ಹೊಸ ಬಂಡಿಹರ್ಲಾಪುರ, ಹಳೇ ಬಂಡಿಹರ್ಲಾಪುರ, ಬಸಾಪುರ, ಮಹಮ್ಮದನಗರ, ಕಂಪಸಾಗರ, ಹಿಟ್ನಾಳ, ಹುಲಿಗಿ, ಬೇವಿನಹಳ್ಳಿ, ಲಿಂಗದಹಳ್ಳಿ, ಗಿಣಿಗೇರಾ, ಗುಳದಳ್ಳಿ, ಹಾಲಳ್ಳಿ, ಗಬ್ಬೂರು, ಕಲ್ಲತಾವರಗೇರಾ, ದನಕನದೊಡ್ಡಿ, ಅಬ್ಬಿಗೇರಿ, ಕೂಕನಪಳ್ಳಿ, ವಣಬಳ್ಳಾರಿ, ಇಂದರಗಿ, ಜಬ್ಬಲಗುಡ್ಡ, ಇಂದ್ರ ನಗರ, ಮುಕ್ಕುಂಪಿ, ಹೇಮಗುಡ್ಡ, ಬಿಳೇಬಾವಿ, ನಾಗೇಶನಹಳ್ಳಿ, ಚಂದ್ರಗಿರಿ, ಹಳೇ ಕುಮಟಾ, ಹೆಗ್ಗಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಸಕಲ ಸದ್ಭಕ್ತರು, ಗುರು ಹಿರಿಯರು, ಯುವ ಸಮೂಹ ಈ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ನಾನಾ ಭಾಗಗಳಿಂದಲೂ ಭಕ್ತರು ಆಗಮಿಸಲಿದ್ದಾರೆ.

ಭಕ್ತಾದಿಗಳಿಗೆ ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಜರುಗಲಿದೆ. ವಿಶೇಷವಾಗಿ ಪ್ರತಿ ಅಮವಾಸ್ಯೆಯ ದಿನದ0ದು ಲಕ್ಕಮ್ಮದೇವಿ ಸನ್ನಿಧಾನದಲ್ಲಿ ಅನ್ನಸಂತರ್ಪಣೆ ಇರಲಿದೆ. ಸಕಲ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ತಮ್ಮ ತನು-ಮನ-ಧನದಿಂದ ಸೇವೆ ಸಲ್ಲಿಸಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯವರ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸದ್ಭಕ್ತರಾದ ಶ್ರೀ ಅನ್ನಪೂರ್ಣೇಶ್ವರಿ (ಲಕ್ಕಮ್ಮ) ದಾಸೋಹ ಸೇವಾ ಟ್ರಸ್ಟ್(ರಿ) ಇವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande