

ಬಳ್ಳಾರಿ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳು ಹಾಗೂ ಯುವಜನರು ಸೋಶಿಯಲ್ ಮೀಡಿಯಾದ ವ್ಯಾಮೋಹಕ್ಕೆ ಬಲಿಯಾಗದೇ ಓದಿನತ್ತ ಗಮನ ನೀಡಿ ಪೋಷಕರ ಕನಸುಗಳನ್ನು ನನಸಾಗಿಸಿ ಎಂದು ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.
ಬಳ್ಳಾರಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಪ್ರೌಢಶಾಲೆಯ ವಾರ್ಷಿಕೋತ್ಸವ ಮತ್ತು ಸಾಂಸ್ಕøತಿಕ ಸಂಘಗಳ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯದ್ದೂ ಇರುತ್ತದೆ, ಕೆಟ್ಟದ್ದೂ ಇರುತ್ತದೆ. ಸೋಶಿಯಲ್ ಮೀಡಿಯಾ ನೀಡುವ ಅನುಭವ ತಾತ್ಕಾಲಿಕವಾಗಿ ಇರುತ್ತದೆ. ಕಾರಣ ಸೋಶಿಯಲ್ ಮೀಡಿಯಾದ ಮಾಹಿತಿಯನ್ನು ಜ್ಞಾನಾರ್ಜನೆಗೆ ಮತ್ತು ವಿದ್ಯಾಭ್ಯಾಸಕ್ಕೆ, ಭವಿಷ್ಯಕ್ಕೆ ಮಾತ್ರ ಬಳಸಿಕೊಳ್ಳಲು ಪ್ರಯತ್ನಿಸಿ. ಈ ವಯಸ್ಸಿನಲ್ಲಿ ಶಿಕ್ಷಕರು, ಗುರು - ಹಿರಿಯರು ಮತ್ತು ಪೋಷಕರ ಮಾರ್ಗದರ್ಶನಗಳನ್ನು ಪಾಲಿಸಿ ಎಂದರು.
ಉನ್ನತ ವ್ಯಾಸಂಗಕ್ಕೆ ಹೊರ ಜಿಲ್ಲೆಗಳಿಗೆ ಹೋದಾಗ `ನಮ್ಮ ಬಳ್ಳಾರಿ'ಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಬಳ್ಳಾರಿಯನ್ನು ಅಭಿವೃದ್ಧಿಪಡಿಸಲು ನಾನು, ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ಇದ್ದಲ್ಲಿ ಮುಂಬರುವ 40 ವರ್ಷಗಳ ಕಾಲ ನಾನು ಬಳ್ಳಾರಿಯ ಶಾಸಕನಾಗಿ ನಿಮ್ಮ ಸೇವೆ ಮಾಡುವೆ ಎಂದರು.
ಬಳ್ಳಾರಿ ನಗರ ವ್ಯಾಪ್ತಿಯ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ನಾನು ಕಂಕಣ ಬದ್ಧನಾಗಿರುವೆ. ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಐಎಎಸ್-ಐಪಿಎಸ್ ಉನ್ನತ ಹುದ್ದೆಗಳನ್ನು ಪಡೆದು ಬಳ್ಳಾರಿ ನಗರಕ್ಕೆ ಗೌರವ, ಕೀರ್ತಿ, ಅಭಿಮಾನಗಳನ್ನು ತರಬೇಕು ಎಂದು ಮನವಿ ಮಾಡಿದರು.
ಕಾಲೇಜಿನ ಆವರಣದಲ್ಲಿ 1.24 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ 7 ಕೊಠಡಿಗಳು, 2 ಲ್ಯಾಬೊರೇಟರಿಗಳನ್ನು ಉದ್ಘಾಟಿಸಿದರು. ಶುದ್ಧ ಕುಡಿಯುವ ನೀರಿನ ಘಟಕ (ಆರ್‍ಓ ಪ್ಲಾಂಟ್) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಮಿಂಚು ಶ್ರೀನಿವಾಸ, ಜಬ್ಬಾರ್, ಕುಬೇರಾ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಸುಬ್ಬರಾಯುಡು, ಮೊಹಮ್ಮದ ಭಾಯ್, ಭಂಭಂ ದಾದಾಭಾಯ್, ಬಿಆರೆಲ್ ಸೀನಾ, ಶಿವರಾಜ್ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್