

ಬಳ್ಳಾರಿ, 19 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಲಿಂಗೈಕ್ಯ ಶ್ರೀಮತಿ ಬಸವರಾಜೇಶ್ವರಿ ಅವರ 18ನೇ ಸಂಸ್ಮರಣೆಯ ಅಂಗವಾಗಿ ಬಳ್ಳಾರಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್‍ನ (ಬಿಐಟಿಎಂ) ಮಹಾವಿದ್ಯಾಲಯದಲ್ಲಿ ಗುರುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆದಿದ್ದು 175ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದ್ದಾರೆ.
ಟಿಇಹೆಚ್‍ಆರ್‍ಡಿ ಟ್ರಸ್ಟ್ ಮತ್ತು ಬಿಪಿಎಸ್‍ಸಿ ಅಧ್ಯಕ್ಷರಾಗಿರುವ ಡಾ. ಎಸ್.ಜೆ.ವಿ. ಮಹಿಪಾಲ್ ಅವರು, ಶ್ರೀಮತಿ ಬಸವರಾಜೇಶ್ವರಿ ಅವರು ದೂರದೃಷ್ಟಿಯನ್ನು ಹೊಂದಿರುವ ಕಾರಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮವಾದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಸಾಧ್ಯವಾಗಿದೆ. ಅಲ್ಲದೇ, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿದೆ ಎಂದರು.
ಬಿಐಟಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಯಡವಳ್ಳಿ ಬಸವರಾಜ್ ಅವರು, ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಬಸವರಾಜೇಶ್ವರಿ ಅವರು, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದು, ಅವರಿಗೆ ಸೂಕ್ತವಾದ ಶಿಕ್ಷಣ ಸಂಸ್ಥೆಯ ಅಗತ್ಯವಿದೆ ಎಂದು ತಿಳಿದು, ಬಳ್ಳಾರಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು ಎಂದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ (ಐಆರ್‍ಸಿಎಸ್)ನ ಜಿಲ್ಲಾ ಘಟಕದ ಕಾರ್ಯದರ್ಶಿ ಶಕೀಬ್ ಅವರು, ರೆಡ್ ಕ್ರಾಸ್ ಸಂಸ್ಥೆಯ ಜಾಗತಿಕ ಸೇವೆಗಳು ವಿಶ್ವಮಾನ್ಯವಾಗಿವೆ. ರಕ್ತವನ್ನು ಕಾರ್ಖಾನೆಗಳಲ್ಲಿ ಉತ್ಪಾದಿಸುವುದಿಲ್ಲ. ರಕ್ತದಾನದ ಮೂಲಕ ಜೀವಿಗಳನ್ನು ಸಂರಕ್ಷಿಸಬೇಕಾಗಿದೆ ಎಂದರು.
ಅಭಯ್ ಕಶ್ಯಪ್ ಅವರು ಸ್ವಾಗತ ಕೋರಿದರು. ಆರತಿ ಅವರು ವಂದನಾರ್ಪಣೆ ಸಲ್ಲಿಸಿದರು. ರಕ್ತದಾನಿಗಳಿಗೆ
ಪ್ರಮಾಣಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ನ ಬಳ್ಳಾರಿ ಘಟಕದ ಅಧ್ಯಕ್ಷರಾದ ಡಾ. ವಿ.ಜೆ. ಭರತ್, ಬಿಐಟಿಎಂನ ಉಪ ಪ್ರಾಂಶುಪಾಲರಾದ ಡಾ. ಬಿ.ಎಸ್. ಖೇಣೇದ್, ಡಾ. ಎಂ. ರಾಮಚಂದ್ರ, ಡಾ. ಶೇಖ್‍ಮೀರ್ ಡಿ. ಸಂಜಯ್‍ಗಾಂಧಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರಾದ ಗೌರಿಶಂಕರ್ ಹಿರೇಮಠ, ಫಕ್ರುದ್ದೀನ್, ಡಾ. ನರಸಿಂಹಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್