
ಗದಗ, 19 ಫೆಬ್ರವರಿ (ಹಿ.ಸ.)
ಆ್ಯಂಕರ್:
ಗದಗ ಜಿಲ್ಲೆಯಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆಗಳು ಮತ್ತೆ ಮುಂದುವರೆದಿವೆ. ಇತ್ತೀಚೆಗಷ್ಟೇ ಶಿಂಗಟಾಲೂರು ಗ್ರಾಮದಲ್ಲಿ ನಡೆದ ದೇವರ ಮೂರ್ತಿ ಧ್ವಂಸ ಪ್ರಕರಣ ಮಾಸುವ ಮುನ್ನವೇ, ಇದೀಗ ಇನ್ನೆರಡು ಕಡೆಗಳಲ್ಲಿ ಪುರಾತನ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ.
ಮುಂಡರಗಿ ತಾಲೂಕು ವ್ಯಾಪ್ತಿಯ ಮಲ್ಲಿಕಾರ್ಜುನಪುರ ಗ್ರಾಮದಲ್ಲಿರುವ ಗಾಳಿ ಬಸವೇಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗವನ್ನು ಭಗ್ನಗೊಳಿಸಲಾಗಿದೆ. ಅಲ್ಲದೆ ಬಸವೇಶ್ವರ ದೇವಸ್ಥಾನದಲ್ಲಿಯೂ ಶಿವಲಿಂಗ ಧ್ವಂಸಗೊಂಡಿರುವುದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೊಂದೆಡೆ ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯ ಆದರಳ್ಳಿ ಸಮೀಪದಲ್ಲಿರುವ ಮರಿಯಮ್ಮ ದೇವಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಯ ಮುಖಕ್ಕೆ ಮಸಿ ಬಳಿದು, ಮುಖವನ್ನೇ ಧ್ವಂಸಗೊಳಿಸಿರುವುದು ಭಕ್ತರಲ್ಲಿ ಆಘಾತ ಮೂಡಿಸಿದೆ.
ಶಿವರಾತ್ರಿ ದಿನದಂದು ಶಿಂಗಟಾಲೂರು ಗ್ರಾಮದಲ್ಲಿ ಶಿವಲಿಂಗ, ನಂದಿ ವಿಗ್ರಹ ಹಾಗೂ ಹೊನ್ನತ್ತೆಮ್ಮ ದೇವಿಯ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಅದರ ಬೆನ್ನಲ್ಲೇ ಇದೀಗ ಮತ್ತೆರಡು ಕಡೆಗಳಲ್ಲಿ ಪುರಾತನ ಕಾಲದ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗಿರುವುದು ಸಂಶಯ ಹಾಗೂ ಆತಂಕ ಹೆಚ್ಚಿಸಿದೆ.
ಜನವಸತಿ ಇಲ್ಲದ ಪ್ರದೇಶಗಳಲ್ಲಿ ಇರುವ ದೇವಸ್ಥಾನಗಳನ್ನೇ ಆಯ್ದು ದುಷ್ಕರ್ಮಿಗಳು ಕೃತ್ಯ ನಡೆಸಿದರೇ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಘಟನೆಗಳು ಮುಂಡರಗಿ ಪೊಲೀಸ್ ಠಾಣೆ ಹಾಗೂ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದುಷ್ಟರ ದುಷ್ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP