ಬಸ್ ನಿಲ್ದಾಣದಲ್ಲಿ ವಾಮಾಚಾರ, ಆತಂಕದಲ್ಲಿ ಜನರು
ಗದಗ, 18 ಫೆಬ್ರವರಿ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದಲ್ಲಿ ವಾಮಾಚಾರ ನಡೆಸಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದ ಆವರಣದಲ್ಲಿ ನಕ್ಷತ್ರ ಆಕಾರದಲ್ಲಿ ಕಪ್ಪು ಬಣ್ಣದ ಗೊಂಬೆ, ಮೊಟ್ಟೆ, ಎಲೆ ಅಡಿಕೆ,
ಫೋಟೋ


ಗದಗ, 18 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದಲ್ಲಿ ವಾಮಾಚಾರ ನಡೆಸಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಹುಡ್ಕೋ ಕಾಲೋನಿಯ ಬಸ್ ನಿಲ್ದಾಣದ ಆವರಣದಲ್ಲಿ ನಕ್ಷತ್ರ ಆಕಾರದಲ್ಲಿ ಕಪ್ಪು ಬಣ್ಣದ ಗೊಂಬೆ, ಮೊಟ್ಟೆ, ಎಲೆ ಅಡಿಕೆ, ನಿಂಬೆಹಣ್ಣುಗಳನ್ನು ಇಟ್ಟು ವಾಮಾಚಾರ ಮಾಡಿರುವುದು ಕಂಡುಬಂದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

“ಹೋದ ವರ್ಷ ನಾ ಬಯಸಿದ್ದು ಸಿಕ್ಕಿಲ್ಲ… ಆದ್ರೆ ಈ ವರ್ಷ ತೊಗೊಳದೆ ಬಿಡಲ್ಲ” ಎಂಬ ಬೆದರಿಕೆಯಂತಿರುವ ವಾಕ್ಯಗಳನ್ನು ಬರೆಯಲಾಗಿದೆ ಎನ್ನಲಾಗಿದ್ದು, ಇದರಿಂದ ಜನರಲ್ಲಿ ಭಯ ಇನ್ನಷ್ಟು ಹೆಚ್ಚಾಗಿದೆ. ನಿನ್ನೆ ಅಮಾವಾಸ್ಯೆಯ ದಿನವೇ ಈ ಕೃತ್ಯ ನಡೆದಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಈ ಘಟನೆ ಬೆಳಕಿಗೆ ಬಂದ ಬಳಿಕ ಹುಡ್ಕೋ ಕಾಲೋನಿ ಹಾಗೂ ಸುತ್ತಮುತ್ತಲ ನಿವಾಸಿಗಳು ಬಸ್ ನಿಲ್ದಾಣದ ಕಡೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಕೆಲವರು ದೂರದಿಂದಲೇ ನಿಂತು ವೀಕ್ಷಣೆ ಮಾಡುತ್ತಿದ್ದು, ಮಕ್ಕಳನ್ನೂ ಹೊರಗೆ ಬಿಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಸಾರ್ವಜನಿಕ ಸಂಚಾರಕ್ಕೂ ಅಡ್ಡಿ ಉಂಟಾಗಿದೆ.

ಇದು ಮೊದಲ ಘಟನೆ ಅಲ್ಲ ಎಂದು ಸ್ಥಳೀಯರು ಆರೋಪಿಸಿದ್ದು, ಈ ಹಿಂದೆ ಕೂಡ ಇದೇ ಬಸ್ ನಿಲ್ದಾಣದ ಬಳಿ ವಾಮಾಚಾರ ನಡೆದಿತ್ತು. ಆಗ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇದೀಗ ಮತ್ತೆ ದುಷ್ಕರ್ಮಿಗಳು ಇಂತಹ ಕೃತ್ಯ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮುಂಡರಗಿ ಪೊಲೀಸರು ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಮಾಡಿ ಕಠಿಣ ಕ್ರಮ ಜರುಗಿಸಬೇಕು ಎಂದು ಹುಡ್ಕೋ ಕಾಲೋನಿ ನಿವಾಸಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande