
ಬೆಂಗಳೂರು, 18 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಸಂತ ಕವಿ ಕನಕದಾಸ ಅವರ ಉದಾತ್ತ ಸಂದೇಶಗಳಿಂದ ಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿರುವ ಕನಕಶ್ರೀ ಚ್ಯಾರಿಟೆಬಲ್ ಟ್ರಸ್ಟ್ ಸಮಾಜಮುಖಿ ಸೇವೆಯಲ್ಲಿ ಸಕ್ರಿಯವಾಗಿದೆ. ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ”, ಬಡ ಹಾಗೂ ಅಶಕ್ತರಿಗೆ “ಸಹಾಯಧನ”, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ “ಅಭಿನಂದನೆ” ಮತ್ತು ಸಮಾಜಸೇವಕರಿಗೆ “ಸನ್ಮಾನ” ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಬೆಂಗಳೂರು ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಿರ್ಮಿಸಲಾದ “ಕನಕ ಸಂಕೀರ್ಣ”ದಲ್ಲಿ ಎರಡು ಸಮುದಾಯ ಭವನಗಳು, ಸುಸಜ್ಜಿತ ವಿದ್ಯಾರ್ಥಿನಿಲಯ ಮತ್ತು ವಿಶಾಲ ಅಧ್ಯಯನ ಕೇಂದ್ರವನ್ನು ನಡೆಸಲಾಗುತ್ತಿದೆ. ಸಮುದಾಯ ಭವನಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಲಾಭರಹಿತವಾಗಿ ಕೈಗೆಟುಕುವ ಶುಲ್ಕದಲ್ಲಿ ನೀಡಲಾಗುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ಹಾಗೂ ರಿಯಾಯಿತಿ ದರದಲ್ಲಿ ಊಟೋಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಇದೀಗ ಟ್ರಸ್ಟ್ ಸಹಯೋಗದಲ್ಲಿ ನಗರದ ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯಾದ ಇನ್ ಸೈಟ್ ಐಎಎಸ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಶಿಬಿರವನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ವಿನಯ ಕುಮಾರ ಅವರ ನೇತೃತ್ವದಲ್ಲಿ ಉಚಿತ ವಸತಿ, ಅಧ್ಯಯನ ಕೇಂದ್ರ ಹಾಗೂ ರಿಯಾಯಿತಿ ದರದಲ್ಲಿ ಊಟೋಪಹಾರ ಸಹಿತ ಕನಿಷ್ಠ ವೆಚ್ಚದಲ್ಲಿ ಗುಣಮಟ್ಟದ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ.
ಈ ಶಿಬಿರವು ಸಮಾಜಸೇವೆಯ ದೃಷ್ಟಿಯಿಂದ ಲಾಭಾಪೇಕ್ಷೆಯಿಲ್ಲದೆ ನಡೆಸಲಾಗುತ್ತಿದ್ದು, ಕುರುಬ ಸಮಾಜ ಸೇರಿದಂತೆ ಇತರ ಹಿಂದುಳಿದ ವರ್ಗಗಳ ಉದ್ಯೋಗಾರ್ಥಿಗಳಿಗೆ ಸಹ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಪ್ರವೇಶಾವಕಾಶ ಹಾಗೂ ಹೆಚ್ಚಿನ ಮಾಹಿತಿಗಾಗಿ ನಂದ ಆಶೀರ್ವಾದ್ ಕಾಂಪ್ಲೆಕ್ಸ್, 3ನೇ ಮಹಡಿ, ಚಂದ್ರ ಲೇಔಟ್, ವಿಜಯನಗರ, ಬೆಂಗಳೂರು – 560072 ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa