
ಗದಗ, 18 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕ್ಷುಲ್ಲಕ ಕಾರಣವೊಂದು ತೀವ್ರ ಸ್ವರೂಪ ಪಡೆದು ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾದ ಘಟನೆ ಗದಗ ನಗರದ ನಂದೀಶ್ವರ ನಗರದಲ್ಲಿ ನಡೆದಿದೆ.
ಮನೆ ಪಕ್ಕದ ಜಾಗದ ವಿಚಾರವಾಗಿ ಆರಂಭವಾದ ಮಾತಿನ ಜಗಳ, ಕೆಲವೇ ಕ್ಷಣಗಳಲ್ಲಿ ದೊಣ್ಣೆ ಹಿಡಿದು ಪರಸ್ಪರ ಹಲ್ಲೆ ನಡೆಸುವ ಮಟ್ಟಕ್ಕೆ ತಲುಪಿದೆ.
ಭೀಮಪ್ಪ ಜಗ್ಗಲ್ ಕುಟುಂಬ ಹಾಗೂ ಕುಮಾರ್ ಮಿರ್ಚಿ ಕುಟುಂಬದವರ ನಡುವೆ ಪರಸ್ಪರ ಗಲಾಟೆಯಾಗಿದೆ.
ಈ ವೇಳೆ ಶಿವಕುಮಾರ ಮಿರ್ಚಿ ಹಾಗೂ ಭೀಮಪ್ಪ ಜಗ್ಗಲ್ ಕುಟುಂಬಸ್ಥರ ನಡುವೆ ತೀವ್ರ ಮಾರಾಮಾರಿ ನಡೆದಿದೆ. ಗಲಾಟೆಯ ಸಂದರ್ಭದಲ್ಲಿ ಮಹಿಳೆಯರು ಜಡೆ ಹಿಡಿದು ಪರಸ್ಪರ ಕಾದಾಡಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಯಲ್ಲಿ ಗಾಯಗೊಂಡ ಎರಡೂ ಕುಟುಂಬದ ಸದಸ್ಯರನ್ನು ಚಿಕಿತ್ಸೆಗಾಗಿ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆ ಗದಗ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಸ್ಪರ ದೂರುಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP