ಬಡತನ ಬೇರು ಸಹಿತ ಕಿತ್ತೊಗೆದ ಪಂಚ ಗ್ಯಾರಂಟಿ ಯೋಜನೆ : ಸಚಿವ ಎಚ್.ಕೆ.ಪಾಟೀಲ
ಗದಗ, 18 ಫೆಬ್ರವರಿ (ಹಿ.ಸ.) : ಆ್ಯಂಕರ್ : ಸ್ವಾತಂತ್ರ್ಯ ನಂತರ ಬಡಜನರ ಬದುಕು ಬದಲಾಯಿಸಿದಂತಹ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಕ್ರಾಂತಿಕಾರಕ ಕಾರ್ಯವನ್ನು ರಾಜ್ಯ ಸರಕಾರ ಮಾಡಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರ
ಫೋಟೋ


ಗದಗ, 18 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಸ್ವಾತಂತ್ರ್ಯ ನಂತರ ಬಡಜನರ ಬದುಕು ಬದಲಾಯಿಸಿದಂತಹ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಕ್ರಾಂತಿಕಾರಕ ಕಾರ್ಯವನ್ನು ರಾಜ್ಯ ಸರಕಾರ ಮಾಡಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿಂದು ಜರುಗಿದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆ ಜಾರಿಯಿಂದಾಗಿ ಸಮಾಜವನ್ನು ಸುಧಾರಿಸಿ, ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ರಾಜ್ಯದ ಪ್ರತಿ ಬಡ ಕುಟುಂಬಕ್ಕೆ ಐದು ಸಾವಿರ ರೂಪಾಯಿ ಪ್ರತಿ ತಿಂಗಳು ತಲುಪಿಸುವ ಕಾರ್ಯವಾಗುತ್ತಿದೆ. ಜಿಲ್ಲೆಯಲ್ಲಿ 2.28 ಲಕ್ಷ ಕುಟುಂಬಗಳನ್ನು ತಲುಪಿದ್ದೆವೆ. 1 ಕೋಟಿ 10 ಸಾವಿರ ಹಣ ಜನರ ಕೈಮುಟ್ಟಿದೆ ಎಂದರು.

ಬಡವರ ಅಭಿವೃದ್ಧಿ ಬಯಸದೆ ಇರುವವರು ಪಂಚ ಗ್ಯಾರಂಟಿ ಕುರಿತು ಅಪಸ್ವರ ಎತ್ತುವರು. ಪಂಚ ಗ್ಯಾರಂಟಿ ಹಣ ತಲುಪಿಸುವುದರಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದೇ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸಿದ್ದರ ಅಭಿಮಾನ ಹಾಗೂ ಸಾರ್ಥಕ ಭಾವನೆ ರಾಜ್ಯ ಸರಕಾರಕ್ಕಿದೆ ಎಂದರು.

ಪಂಚ ಗ್ಯಾರಂಟಿಗಳನ್ನು ಮಾನವ ಹಕ್ಕುಗಳನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಗದಗ ಜನತೆ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟಿದ್ದು ಜನಪ್ರತಿನಿಧಿಗಳು ಹಂಚುವವರಾಗಿದ್ದು ಬಡಜನರಿಗೆ ದಕ್ಕಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಲಾಗಿತ್ತು. ಆದರೆ ಈ ಮಹತ್ವಾಕಾಂಕ್ಷೆ ಯೋಜನೆಗಳನ್ನು ಅಧಿಕಾರ ವಹಿಸಿದ ಕೆಲ ದಿನಗಳಲ್ಲಿ ಜಾರಿಗೊಳಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಟೀಕೆಗಳಿಗೆ ಪ್ರತ್ಯುತ್ತರ ನೀಡಲಾಗಿದೆ.

ಮಹಾತ್ಮಾ ಗಾಂಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವತಿಯಿಂದ ಜರುಗಿದ ಸಮೀಕ್ಷೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 93%, ಗ್ರೃಹಜ್ಯೋತಿ 86%, ಗೃಹ ಲಕ್ಷ್ಮೀ 95.4%, ಶಕ್ತಿ ಯೋಜನೆಯಡಿ 86% ಫಲಾನುಭವಿಗಳು ತೃಪ್ತ ಹಾಗೂ ಸ್ವಾವಲಂಭಿ ಜೀವನ ಸಾಗಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

ಕೇಂದ್ರ ಸರಕಾರ ರಾಜ್ಯ ಸರಕಾರದ ತೆರಿಗೆ ಪಾಲನ್ನು ನೀಡದೆ ಒಕ್ಕೂಟ ವ್ಯವಸ್ಥೆಯಲ್ಲಿನ ವಿಶ್ವಾಸರ್ಹತೆ ಕಡಿಮೆಗೊಳಿಸುತ್ತಿದೆ. ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಉದ್ದೇಶಪೂರ್ವಕವಾಗಿ ತಲುಪದೆ ಇರುವಂತೆ ಮಾಡುವವರನ್ನು ಗುರುತಿಸಿ ಅಂತಹವರ ವಿರುದ್ದ ಕ್ರಮ ಜರುಗಿಸಬೇಕು. ಜೊತಗೆ ಯೋಜನೆಯಿಂದ ಹೊರಗುಳಿದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರಕುವಂತಾಗಬೇಕು ಎಂದು ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.

ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಪಾಟೀಲ ಅವರು ಮಾತನಾಡಿ ರಾಜ್ಯ ಸರಕಾರದ ಪಂಚ ಗ್ಯಾರಂಟಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ರಾಜ್ಯದ ಪ್ರತಿಯೊಂದು ಕುಟುಂಬವನ್ನು ತಲುಪಿರುವುದು ತೃಪ್ತಿಕರವಾಗಿದೆ ಎಂದರು.

ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದAತಹ ಸಂದರ್ಭದಲ್ಲಿ ಬಡ ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.ರಾಜ್ಯ ಸರಕಾರದಿಂದ ಜಾರಿಗೊಳಿಸುವ ಜನಪರ ಯೋಜನೆಗಳನ್ನು ತಳಮಟ್ಟದಿಂದಲೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಂ.ರೇವಣ್ಣ ಅವರು ಮಾತನಾಡಿ ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಇಂದು ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿವೆ. ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು ಈ ಯೋಜನೆಗಳು ಪ್ರತಿಯೊಬ್ಬ ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕು ಎಂದರು.

ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಲಾಗಿದೆ. ನಮ್ಮ ರಾಜ್ಯ ಕಂಡಂತಹ ಧೀಮಂತ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರು ಉಳುವವನೆ ಒಡೆಯ, ಬಂಗಾರಪ್ಪನವರ ಆಶ್ರಯ ಯೊಜನೆ, ರೈತರಿಗೆ ಉಚಿತ ವಿದ್ಯುತ್ , ವೀರಪ್ಪ ಮೊಯಲಿ ಅವರು ಸಿ.ಇ.ಟಿ. ಹಾಗೂ ಎಸ್.ಎಂ ಕೃಷ್ಣ ಅವರು ರಾಜ್ಯದ ಆರ್ಥಿಕತೆಗೆ ಒತ್ತು ನೀಡುವದರ ಮೂಲಕ ರಾಜ್ಯದ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದರು.

ಇವೆಲ್ಲವನ್ನೂ ಮೀರಿ ಸಿದ್ದರಾಮಯ್ಯನವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುತ್ತಾರೆ. ರಾಜ್ಯ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ತಲಾ ಆದಾಯವು ಹೆಚ್ಚಳವಾಗಿದೆ. ಸರಕಾರವು ರಾಜ್ಯದ ಮಹಿಳೆಯರ ಸಬಲೀಕರಣಕ್ಕೂ ಅನೇಕ ಯೋಜನೆಗಳನ್ನು ರೂಪಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇಂದು ನಮ್ಮ ರಾಜ್ಯವು ಇಡೀ ರಾಷ್ಟçಕ್ಕೆ ಮಾದರಿಯಾಗಿದೆ ಎಂದರು. ಇಪ್ಪತ್ತು ಜಿಲ್ಲೆಗಳಲ್ಲಿ ಜರುಗಿದ ಕಾರ್ಯಕ್ರಮಗಳಲ್ಲಿ ಗದಗ ಜಿಲ್ಲೆಯ ಕಾರ್ಯಕ್ರಮವು ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಹೆಚ್.ಎಂ.ರೇವಣ್ಣ ಅವರು ಹರ್ಷವ್ಯಕ್ತ ಪಡಿಸಿದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಪಾಟೀಲ ಅವರು ಮಾತನಾಡಿ ಗದಗ ಜಿಲ್ಲೆಯ ಇವತ್ತಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರು ಸ್ವಾಭಿಮಾನದ ಜೀವನ ಸಾಗಿಸುವ ಉದ್ದೇಶದೊಂದಿಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ಪಂಚಗ್ಯಾರAಟಿ ಯೋಜನೆಯು ರಾಜ್ಯದ ಒಂದು ಕೋಟಿ ಮೂವತ್ತು ಲಕ್ಷ ಜನ ಈ ಯೋಜನೆಯ ವ್ಯಾಪ್ತಿಗೊಳಪಟ್ಟಿದ್ದಾರೆ. ದೇಶದ ಅನೇಕ ಆರ್ಥಿಕ ತಜ್ಞರು ಪಂಚ ಗ್ಯಾರಂಟಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಇಂತಹ ಕಾರ್ಯಕ್ರಮವನ್ನು ಪಂಚಾಯತ ಮಟ್ಟದಲ್ಲಿಯೂ ಆಯೋಜಿಸುವ ಮೂಲಕ ಪಂಚಗ್ಯಾರAಟಿ ಯೋಜನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮುತ್ತುರಾಜ್ ಅವರು ಮಾತನಾಡಿ ಸಾಕಷ್ಟು ಟೀಕೆಗಳ ನಡುವೆಯೂ ರಾಜ್ಯ ಸರಕಾರವು ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಟೀಕೆಗಳಿಗೆ ಉತ್ತರ ದೊರಕಿದಂತಾಗಿದೆ ಎಂದರು. ಇನ್ನೂ ಕೆಲ ದಿನಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಯಾಗಿ ಸಾವಿರ ದಿನಗಳನ್ನು ಯಶಸ್ವಿಯಾಗಿ ಪೂರೈಸಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿಯಾಗಿದೆ ಎಂದು ಅಧ್ಯಯನದ ವರದಿಗಳ ಮೂಲಕ ತಿಳಿದು ಬರುತ್ತದೆ. ಶಕ್ತಿ ಯೋಜನೆಯಡಿ ಆರು ನೂರು ಕೋಟಿಗೂ ಅಧಿಕ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಿಂದ ರಾಜ್ಯದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ 1.28 ಕೋಟಿ ಮಹಿಳೆಯರಿಗೆ ಸಹಾಯವಾಗುವುದರ ಮೂಲಕ ರಾಜ್ಯದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿಗಳಾಗುವ ಮೂಲಕ ಬಹುದೊಡ್ಡ ಬದಲಾವಣೆಯನ್ನು ನಾವು ಕಾಣಬಹುದಾಗಿದೆ.

ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಪ್ರತಿ ಕುಟುಂಬಕ್ಕೆ ಪ್ರತಿ ಮಾಹೆ ಅಂದಾಜು ನಾಲ್ಕರಿಂದ ಐದು ಸಾವಿರ ರೂಪಾಯಿಗಳ ಉಳಿತಾಯವಾಗುತ್ತಿದ್ದು ಇದರಿಂದಾಗಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವ ಮೂಲಕ ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ. ರಾಜ್ಯದ ತಲಾ ಆದಾಯದ ಹೆಚ್ಚಳದಿಂದಾಗಿ ಕೇಂದ್ರಕ್ಕೆ ರಾಜ್ಯದಿಂದ ಹೆಚ್ಚಿನ ತೆರಿಗೆಯನ್ನು ನೀಡಲಾಗುತ್ತಿದೆ. ರಾಜ್ಯದ ಅಂದಾಜು ಒಂದೂವರೆ ಕೋಟಿ ಜನ ಈ ಪಂಚಗ್ಯಾರಂಟಿ ಯೋಜನೆಗಳ ಸದುಪಯೋಗಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪಂಚಗ್ಯಾರಂಟಿ ಯೋಜನೆ ಜಾರಿಯಿಂದಾಗಿ ತಲಾದಾಯದಲ್ಲಿಯೂ ಕೂಡ ರಾಜ್ಯವು ಪ್ರಥಮ ಸ್ಥಾನದಲ್ಲಿದ್ದು ರಾಜ್ಯದಲ್ಲಿ ಆದಂತಹ ಬದಲಾವಣೆ ಕುರಿತು ಮಾಹಿತಿಯನ್ನು ವಿವರವಾಗಿ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಬಿ.ಬಿ.ಅಸೂಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸರಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಘೋಷಿಸಿದಂತಹ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಗಳನ್ನು ನಿರಂತರವಾಗಿ ಜರುಗಿಸಿ ಅರ್ಹ ಎಲ್ಲ ಫಲಾನುಭವಿಗಳನ್ನು ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆಗೆ ಒಳಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕಬರಸಾಬ ಬಬರ್ಚಿ, ಉಪಾಧ್ಯಕ್ಷರುಗಳಾದ ಶ್ರೀಮತಿ ನೀಲಮ್ಮ ಬೋಳನವರ, ದೀಪಕ ಜಿ ಲಮಾಣಿ, ಹೇಮಂತಗೌಡ ಪಾಟೀಲ, ಪಿ.ಬಿ.ಅಳಗವಾಡಿ, ಫಕ್ರುಸಾಬ ಚಿಕ್ಕಮಣ್ಣೂರ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಪ್ರಾದಿಕಾರದ ಅಧ್ಯಕ್ಷರುಗಳಾದ ಅಶೋಕ ಮಂದಾಲಿ, ಸಂಗನಗೌಡ ಪಾಟೀಲ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ನಾಗರಾಜ ಶಿವಪ್ಪ ಮಡಿವಾಳರ, ಶರಣಪ್ಪ ಬೆಟಗೇರಿ, ವೀರಯ್ಯ ಮಠಪತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾದಿಕಾರದ ಸದಸ್ಯರುಗಳಾದ ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸಿಕಟ್ಟಿ, ಶರೀಫ್ ಬೆಳೆಯಲಿ, ರಾಜೀವ ಗೊಡಚಪ್ಪ ಕುಂಬಿ, ಶಿವನಗೌಡ ಪಾಟೀಲ, ಆರ್.ಆರ್.ಗಡ್ಡದ್ದೇವರಮಠ, ಗೀತಾ ಬೀರಣ್ಣವರ,ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ರೋಹನ ಜಗದೀಶ್, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಗಣ್ಯರು, ಮುಖಂಡರುಗಳು, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಡೋಣಿ ಗ್ರಾಮದ ನಿಂಗಣ್ಣ ಗಡಾದ ಹಾಗೂ ತಂಡದವರು ಪಂಚ ಗ್ಯಾರಂಟಿ ಕುರಿತು ಜನಪದ ಗೀತೆ, ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು.

ಇದೇ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಗದಗ ಜಿಲ್ಲೆಯ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande