ಡಿಜಿಟಲ್ ಜನಗಣತಿ೨೦೨೭ ಸಿದ್ಧತೆ ; ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ನೇತೃತ್ವದಲ್ಲಿ ಪರಿಶೀಲನಾ ಸಭೆ
ಡಿಜಿಟಲ್ ಜನಗಣತಿ೨೦೨೭ ಸಿದ್ಧತೆ: ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ನೇತೃತ್ವದಲ್ಲಿ ಪರಿಶೀಲನಾ ಸಭೆ
ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿದರು.


ಕೋಲಾರ ೧೮ ಫೆಬ್ರವರಿ (ಹಿ.ಸ) :

ಆ್ಯಂಕರ್ : ಜಿಲ್ಲೆಯಲ್ಲಿ ಮುಂಬರುವ ಡಿಜಿಟಲ್ ಜನಗಣತಿಯನ್ನು ಅತ್ಯಂತ ನಿಖರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಎಂ.ಆರ್. ರವಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕೆಸ್ವಾನ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದರು.

ಮುಂಬರುವ ಡಿಜಿಟಲ್ ಜನಗಣತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೋಲಾರ ಜಿಲ್ಲಾಧಿಕಾರಿ ಅವರು ಎಚ್ಚರಿಸಿದರು.

ಸಭೆಗೆ ಗೈರುಹಾಜರಾದ ಹಾಗೂ ಜನಗಣತಿ ತರಬೇತಿಗಳಲ್ಲಿ ಭಾಗವಹಿಸದ ತಹಶೀಲ್ದಾರ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣವೇ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಮತ್ತು ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಪ್ರತಿ ಶುಕ್ರವಾರ ಜನಗಣತಿ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಪ್ರತಿ ಗುರುವಾರ ಸಂಜೆ ವೇಳೆಗೆ ಎಲ್ಲಾ ತಾಲೂಕುಗಳಿಂದ ಗೂಗಲ್ ಮೀಟ್ ಮೂಲಕ ಮಾಹಿತಿ ಸಂಗ್ರಹಿಸಿ ಸಿದ್ಧರಿರಬೇಕು.

ಜನಗಣತಿ ಕಾರ್ಯಕ್ಕೆ ಎನ್ಯೂಮರೇಟರ್‌ಗಳನ್ನು ಆಯ್ಕೆ ಮಾಡುವಾಗ ಅವರಿಗೆ ಮೊಬೈಲ್ ಅಪ್ಲಿಕೇಶನ್ ಬಳಸುವ ಕನಿಷ್ಠ ಜ್ಞಾನವಿರಬೇಕು. ಗರ್ಭಿಣಿಯರು, ಸಣ್ಣ ಮಕ್ಕಳಿರುವವರು ಅಥವಾ ಹಿರಿಯ ನಾಗರಿಕರನ್ನು ಈ ಕಾರ್ಯಕ್ಕೆ ನಿಯೋಜಿಸದಂತೆ ಎಚ್ಚರಿಕೆ ನೀಡಿದರು.

ಕೇವಲ ಅಂಕಿ-ಅ0ಶಗಳನ್ನು ಸಂಗ್ರಹಿಸುವುದಷ್ಟೇ ಅಲ್ಲದೆ, ಗುಣಮಟ್ಟದ ದತ್ತಾಂಶ ಸಂಗ್ರಹಣೆಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಎನ್ಯೂಮರೇಟರ್‌ಗಳಿಂದ ಹಿಡಿದು ಚಾರ್ಜ್ ಆಫೀಸರ್‌ಗಳವರೆಗೆ ಎಲ್ಲರಿಗೂ ವ್ಯವಸ್ಥಿತ ತರಬೇತಿ ನೀಡಲಾಗುವುದು.

ಜನಗಣತಿ ಕಾರ್ಯಕ್ಕಾಗಿ ಕಚೇರಿಗಳಿಗೆ ಅಗತ್ಯವಿರುವ ಕಂಪ್ಯೂಟರ್, ಸ್ಕ್ಯಾನರ್, ಪ್ರಿಂಟರ್ ಮತ್ತು ನೆಟ್ ಸೌಲಭ್ಯಗಳನ್ನು ಒದಗಿಸಲು ಅನುದಾನ ನೀಡಲಾಗುವುದು. ಇವುಗಳು ಕಚೇರಿಯ ಶಾಶ್ವತ ಆಸ್ತಿಯಾಗಿ ಉಳಿಯಲಿವೆ.

ಜನಗಣತಿ ಕಾರ್ಯವು ಸಮಯದ ಮಿತಿಯೊಳಗೆ ನಡೆಯಬೇಕಾದ ಪ್ರಕ್ರಿಯೆಯಾಗಿದ್ದು, ೨೦೨೭ರ ಫೆಬ್ರವರಿಯಿಂದ ಎನ್ಯೂಮರೇಷನ್ ಕಾರ್ಯ ಆರಂಭವಾಗಲಿದೆ. ಸದ್ಯಕ್ಕೆ ಮನೆಗಳ ಪಟ್ಟಿ ಮಾಡುವಿಕೆ ಮತ್ತು ಬ್ಲಾಕ್‌ಗಳ ಗುರುತಿಸುವಿಕೆ ಪ್ರಕ್ರಿಯೆ ನಡೆಯಲಿದೆ.

ಇದು ರಾಷ್ಟ್ರೀಯ ಮಟ್ಟದ ಪ್ರಮುಖ ಕಾರ್ಯವಾಗಿದ್ದು, ಚುನಾವಣಾ ಕೆಲಸದಷ್ಟೇ ಗಂಭೀರವಾದುದು. ಅಧಿಕಾರಿಗಳ ನಡುವೆ ಸಮರ್ಪಕ ಸಮನ್ವಯತೆ ಇರಬೇಕು. ಯಾವುದೇ ನಿರ್ಲಕ್ಷ್ಯ ತೋರಿದಲ್ಲಿ ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು

ಈ ಬಾರಿಯ ಜನಗಣತಿಯು ಸಂಪೂರ್ಣ ಡಿಜಿಟಲ್ ಆಗಿರಲಿದ್ದು, ವೆಬ್ ಪೋರ್ಟಲ್ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಕ್ಷೇತ್ರ ಮಟ್ಟದ ಎನ್ಯುಮರೇಟರ್‌ಗಳು ಕ್ರಿಯೇಟರ್ ಆಪ್ ಬಳಸಿ ಪ್ರತಿ ಬ್ಲಾಕ್‌ನ ಮನೆಗಳ ಲೊಕೇಶನ್ ಮತ್ತು ವ್ಯಾಪ್ತಿಯನ್ನು ಜಿಯೋ ಟ್ಯಾಗಿಂಗ್ ಮೂಲಕ ಗುರುತಿಸಲಿದ್ದಾರೆ. ಸಾರ್ವಜನಿಕರಿಗೆ ಸ್ವಯಂ ನೋಂದಣಿ ಮಾಡಿಕೊಳ್ಳಲು ಸೆಲ್ಫ್ ಎನ್ಯುಮರೇಶನ್ ಪೋರ್ಟಲ್ ಮತ್ತು ಮಾಹಿತಿ ಪಡೆಯಲು ಚಾಟ್‌ಬಾಟ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಈ ಅಪ್ಲಿಕೇಶನ್ ಅಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದ್ದು, ೧೬ ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ.

ಜನಗಣತಿ ಕಾರ್ಯಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಎಡಿಸಿ ಅವರನ್ನು ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಹಾಗೂ ಸಿಪಿಒ ಅವರನ್ನು ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಯಾಗಿ ನೇಮಿಸಲಾಗಿದೆ. ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಚಾರ್ಜ್ ಆಫೀಸರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಶಿಕ್ಷಕರು ಮತ್ತು ಸಿಆರ್‌ಪಿಗಳನ್ನು ಎನ್ಯುಮರೇಟರ್‌ಗಳಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಸ್ಮಾರ್ಟ್ಫೋನ್ ಬಳಕೆ ಗೊತ್ತಿರುವ ಮತ್ತು ಲವಲವಿಕೆಯಿಂದ ಕೆಲಸ ಮಾಡುವವರನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಲು ಸೂಚಿಸಿದರು.

ಮಾಸ್ಟರ್ ಟ್ರೈನರ್ಸ್ಗಳಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಇವರು ಫೀಲ್ಡ್ ಟ್ರೈನರ್ಸ್ಗಳಿಗೆ ತರಬೇತಿ ನೀಡಲಿದ್ದಾರೆ. ಜಿಲ್ಲೆಯಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚು ಎನ್ಯುಮರೇಟರ್‌ಗಳ ಅಗತ್ಯವಿರಬಹುದು ಎಂದು ಅಂದಾಜಿಸಲಾಗಿದೆ.

ದತ್ತಾAಶ ಸುರಕ್ಷತೆ ಮತ್ತು ಸೌಲಭ್ಯಗಳು

ಡಿಜಿಟಲ್ ದತ್ತಾಂಶದ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 'ತ್ರೀ ಟೈಯರ್ ಸೆಕ್ಯೂರಿಟಿ' ವ್ಯವಸ್ಥೆ ಜಾರಿಯಲ್ಲಿರುತ್ತದೆ. ಪ್ರತಿಯೊಂದು ಮೊಬೈಲ್‌ನ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಲಾಗುವುದು, ಇದರಿಂದ ಮೊಬೈಲ್ ಕಳೆದುಹೋದರೂ ದತ್ತಾಂಶ ದುರ್ಬಳಕೆಯಾಗದಂತೆ ಅದನ್ನು ಲಾಕ್ ಮಾಡಬಹುದಾಗಿದೆ. ದತ್ತಾಂಶವು ಎನ್‌ಕ್ರಿಪ್ಟ್ ಮಾದರಿಯಲ್ಲಿ ಶೇಖರಣೆಯಾಗುವುದರಿಂದ ಸೋರಿಕೆಯ ಭಯವಿರುವುದಿಲ್ಲ ಎಂದು ಸಭೆಯಲ್ಲಿ ವಿವರಿಸಲಾಯಿತು.

ಜನಗಣತಿ ಸಿದ್ಧತೆಗಾಗಿ ಜಿಲ್ಲಾ ಮಟ್ಟದಲ್ಲಿ ಮೂಲಸೌಕರ್ಯ ಮತ್ತು ವಾಹನ ಸೌಲಭ್ಯಕ್ಕಾಗಿ ಅನುದಾನ ಬಿಡುಗಡೆಯಾಗಿದ್ದು, ಅಗತ್ಯ ತಾಂತ್ರಿಕ ಸಹಾಯಕರು ಮತ್ತು ಎಂಟಿಎಸ್ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಶೀಘ್ರವೇ ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್,ಜಿಲ್ಲಾ ಸಂಖ್ಯೆ ಸಂಗ್ರಹನಾಧಿಕಾರಿ ಗುರು ಮಹಾದೇವಯ್ಯ, ಎಲ್ಲಾ ನಗರಸಭೆ, ಪುರಸಭೆ ಆಯುಕ್ತರು, ಸಂಬAಧಿತ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande