
ಕೋಲಾರ ೧೮ ಫೆಬ್ರವರಿ (ಹಿ.ಸ) :
ಆ್ಯಂಕರ್ : ಸ್ವಾತಂತ್ರ‍್ಯ ಮತ್ತು ಘನತೆಯಿಂದ ಬದುಕುವುದು ಪ್ರತಿಯೊಬ್ಬ ಮನುಷ್ಯನ ಜನ್ಮಸಿದ್ಧ ಹಕ್ಕು. ಆದರೆ ಇಂದಿಗೂ ಸಮಾಜದಲ್ಲಿ ಜೀತ ಪದ್ಧತಿಯಂತಹ ಅನಿಷ್ಟ ಪದ್ಧತಿ ಜೀವಂತವಾಗಿರುವುದು ದುರದೃಷ್ಟಕರ. ಇದನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೆಸೆಯಲು ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ಅವರು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬಡತನ ಮತ್ತು ಆರ್ಥಿಕ ಸಂಕಷ್ಟಗಳಿ0ದಾಗಿ ಜನರು ಸಣ್ಣಪುಟ್ಟ ಸಾಲಗಳನ್ನು ಪಡೆದು ಜೀತ ಪದ್ಧತಿಗೆ ಸಿಲುಕುತ್ತಿದ್ದಾರೆ. ಇದು ಕ್ರಮೇಣ ಬಡ್ಡಿಯಿಂದ ಚಕ್ರಬಡ್ಡಿಯಾಗಿ ಮಾರ್ಪಟ್ಟು, ಒಂದು ಇಡೀ ತಲೆಮಾರನ್ನೇ ಶೋಷಣೆಯ ಸುಳಿಗೆ ತಳ್ಳುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭಾರತೀಯ ಸಂವಿಧಾನದ ವಿಧಿ ೨೩ರ ಅಡಿಯಲ್ಲಿ ಬಲವಂತದ ದುಡಿಮೆಯನ್ನು ನಿಷೇಧಿಸಲಾಗಿದೆ. ೧೯೭೬ರ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯು ಜಾರಿಗೆ ಬಂದಾಗಿನಿ0ದ ದೇಶಾದ್ಯಂತ ಸುಮಾರು ೩ ಲಕ್ಷ ಹಾಗೂ ಕರ್ನಾಟಕದಲ್ಲಿ ೮೦ ಸಾವಿರಕ್ಕೂ ಹೆಚ್ಚು ಜನರನ್ನು ಜೀತಮುಕ್ತಗೊಳಿಸಲಾಗಿದೆ ಎಂದು ಅಂಕಿ ಅ0ಶಗಳನ್ನು ಹಂಚಿಕೊ0ಡರು.
ಜೀತ ಪದ್ಧತಿಯು ಕೇವಲ ಆರ್ಥಿಕ ಅಸಮಾನತೆಯಲ್ಲ, ಇದು ಸಾಮಾಜಿಕ ಅಸಮಾನತೆಯ ಪ್ರತಿಫಲವೂ ಹೌದು. ಮುಖ್ಯವಾಗಿ ಇಟ್ಟಿಗೆ ಕಾರ್ಖಾನೆಗಳು, ಕೃಷಿ ಕ್ಷೇತ್ರ ಮತ್ತು ಅಸಂಘಟಿತ ವಲಯಗಳಲ್ಲಿ ಈ ಪದ್ಧತಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವಿವರಿಸಿದರು.
ಪೋಷಕರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಆರ್ಥಿಕ ಸಂಕಷ್ಟದಿ0ದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಕೆಲಸಕ್ಕೆ ಕಳುಹಿಸುವುದು ಅವರ ಭವಿಷ್ಯಕ್ಕೆ ಕಂಟಕವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಜಾಗೃತರಾಗಿ ಜಿಲ್ಲೆಯನ್ನು ಜೀತಮುಕ್ತಗೊಳಿಸಲು ಕೈಜೋಡಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ನಟೇಶ್ ಮಾತನಾಡಿ, ಸ್ವಾತಂತ್ರ‍್ಯ ಎಂಬುದು ಕೇವಲ ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಸಂವಿಧಾನ ನಮಗೆ ನೀಡಿರುವ ಗೌರವಯುತ ಜೀವನ ಮತ್ತು ಬದುಕುವ ಹಕ್ಕನ್ನು ಪ್ರತಿಯೊಬ್ಬರೂ ಅನುಭವಿಸಬೇಕು. ೫೦ ವರ್ಷಗಳ ಹಿಂದೆಯೇ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿಗೆ ಬಂದಿದ್ದರೂ, ಇಂದಿಗೂ ಸಮಾಜದಲ್ಲಿ ಈ ಪಿಡುಗು ಜೀವಂತವಾಗಿರುವುದು ವಿಷಾದನೀಯ, ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜೀತ ಪದ್ಧತಿಯ ಭೀಕರತೆಯನ್ನು ವಿವರಿಸಲು ಅವರು ಡಾ. ರಾಜ್‌ಕುಮಾರ್ ನಟನೆಯ 'ಸಂಪತ್ತಿಗೆ ಸವಾಲ್' ಚಿತ್ರವನ್ನು ಉದಾಹರಿಸಿದರು. ಸಿನಿಮಾದಲ್ಲಿ ಸಾಲದ ನೆಪದಲ್ಲಿ ತಲೆಮಾರುಗಳ ಕಾಲ ಗುಲಾಮರನ್ನಾಗಿ ಇಟ್ಟುಕೊಳ್ಳುವ ದೃಶ್ಯಗಳು ಅಂದಿನ ಸಾಮಾಜಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಇಂದಿಗೂ ಕನಿಷ್ಠ ವೇತನ ನೀಡದೆ, ವಿಶ್ರಾಂತಿ ಇಲ್ಲದೆ ದುಡಿಸಿಕೊಳ್ಳುವುದು ಅಥವಾ ಅತಿ ಹೆಚ್ಚಿನ ಸಾಲದ ಬಡ್ಡಿಗೆ ಕಟ್ಟಿಹಾಕಿ ಶೋಷಿಸುವುದು ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಚ್ಚರಿಸಿದರು.
ಕೋಲಾರ ಜಿಲ್ಲೆಯನ್ನು ಜೀತ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಿಇಒ ಅವರು ಕೈಗೊಂಡಿರುವ ಸಂಕಲ್ಪಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಸಮಾಜದಲ್ಲಿ ಎಲ್ಲಾದರೂ ಇಂತಹ ಪದ್ಧತಿ ಕಂಡುಬAದಲ್ಲಿ ಕೂಡಲೇ ವಿಜಿಲೆನ್ಸ್ ಕಮಿಟಿ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾರ್ಚ್ ೧೪, ೨೦೨೬ ರಂದು ನಡೆಯಲಿರುವ ಬೃಹತ್ ಲೋಕ ಅದಾಲತ್ ಬಗ್ಗೆ ಅವರು ಮಾಹಿತಿ ನೀಡಿದರು. ನ್ಯಾಯಾಲಯಗಳಲ್ಲಿ ಬಾಕಿ ಇರುವ ಚೆಕ್ ಬೌನ್ಸ್, ಮೋಟಾರು ವಾಹನ ಅಪಘಾತ, ಆಸ್ತಿ ವಿಭಜನೆ ಪ್ರಕರಣಗಳನ್ನು ರಾಜಿ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು.
ವಕೀಲರ ಶುಲ್ಕ ಮತ್ತು ನ್ಯಾಯಾಲಯದ ಅಲೆದಾಟ ತಪ್ಪಿಸಲು ಇದು ಸುಲಭ ಮಾರ್ಗವಾಗಿದೆ. ಬ್ಯಾಂಕ್ ಸಾಲ ಮರುಪಾವತಿಗೆ ಸಂಬAಧಿಸಿದ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಹೋಗುವ ಮೊದಲೇ ಇಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿದೆ.
ಇಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ. ಉಭಯ ಪಕ್ಷಗಳ ಸಮ್ಮತಿಯೊಂದಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
ಜನವರಿ ಇಂದ ಮಾರ್ಚ್ ವರೆಗೆ ನಡೆಯುತ್ತಿರುವ ಮಧ್ಯಸ್ಥಿಕೆ ಅಭಿಯಾನದ (ಆಡಿive-೨) ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಕೋಲಾರ ನೂತನ ಡಿವೈ ಎಸ್ಪಿ ವಿ. ಕೃಷ್ಣಪ್ಪ ಮಾತನಾಡಿ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿಗೆ ಬಂದು ೫೦ ವರ್ಷಗಳಾದರೂ ಇಂದಿಗೂ ಸಮಾಜದಲ್ಲಿ ಈ ಪಿಡುಗು ಜೀವಂತವಾಗಿರುವುದು ಅತ್ಯಂತ ವಿಷಾದನೀಯ ಸಂಗತಿ ಜೀತ ಪದ್ಧತಿಯು ಮನುಷ್ಯನ ಸ್ವಾತಂತ್ರ‍್ಯವನ್ನು ಕಿತ್ತುಕೊಳ್ಳುವ ಅನಿಷ್ಟ ಪದ್ಧತಿಯಾಗಿದೆ. ಇದು ವ್ಯಕ್ತಿಯ ಘನತೆಗೆ ತರುವ ಧಕ್ಕೆ ಮತ್ತು ಮಾನವ ಹಕ್ಕುಗಳ ನೇರ ಉಲ್ಲಂಘನೆ ಎಂದು ಅವರು ಅಭಿಪ್ರಾಯಪಟ್ಟರು.
ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಆರಂಭವಾದ ಈ ಪದ್ಧತಿ ನಂತರ ಭಾರತಕ್ಕೂ ಹರಡಿತು. ಕಾನೂನುಗಳಿದ್ದರೂ ಸಹ ಅಜ್ಞಾನ ಮತ್ತು ಶಿಕ್ಷಣದ ಕೊರತೆಯಿಂದಾಗಿ ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಜೀತದಾಳುಗಳನ್ನು ಕಾಣಬಹುದಾಗಿದೆ. ೨೦೨೫ರಲ್ಲಿ ಮದ್ದೂರು ತಾಲೂಕಿನ ಕೋಣಸಾಲೆ ಗ್ರಾಮದ ಹಂದಿ ಫಾರ್ಮ್ ಒಂದರಲ್ಲಿ ಎರಡು ಕುಟುಂಬಗಳನ್ನು ಕಾನೂನುಬಾಹಿರವಾಗಿ ಕೂಡಿಹಾಕಿದ್ದ ಪ್ರಕರಣವನ್ನು ಸ್ಮರಿಸಿದ ಅವರು, ಪೊಲೀಸರು ಮತ್ತು ಎಸಿ ಅವರು ಜಂಟಿ ದಾಳಿ ನಡೆಸಿ ೧೦ ಜನರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದ ಘಟನೆಯನ್ನು ಹಂಚಿಕೊ0ಡರು. ಸಮಾಜದಲ್ಲಿ ಇಂತಹ ಪ್ರಕರಣಗಳು ಕಂಡುಬ0ದಲ್ಲಿ ಸಾರ್ವಜನಿಕರು ತಕ್ಷಣ ಮಾಹಿತಿ ನೀಡಬೇಕು. ಪೊಲೀಸ್ ಇಲಾಖೆಯ ಸಹಾಯವಾಣಿ ೧೧೨, ಮಹಿಳಾ ಸಹಾಯವಾಣಿ ೧೮೧ ಮತ್ತು ಮಕ್ಕಳ ಸಹಾಯವಾಣಿ ೧೦೯೮ ಕ್ಕೆ ಕರೆ ಮಾಡುವ ಮೂಲಕ ಈ ಅನಿಷ್ಟ ಪದ್ಧತಿಯನ್ನು ತೊಡೆದುಹಾಕಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಧಿಕಾರಿಗಳ ಶ್ರಮದ ಜೊತೆಗೆ ಸಮಾಜದಲ್ಲಿ ಬದಲಾವಣೆ ಉಂಟಾದಾಗ ಮಾತ್ರ ಇಂತಹ ಪಿಡುಗುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ. ಪ್ರತಿಯೊಬ್ಬರೂ ಜೀತ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಅವರು ಮಾತನಾಡಿ ಜೀತ ಕಾರ್ಮಿಕ ಪದ್ಧತಿಯು ಮಾನವನ ಶೋಷಣೆಯ ಒಂದು ಕ್ರೂರ ರೂಪವಾಗಿದ್ದು, ಆಧುನಿಕ ಸಮಾಜದಲ್ಲಿ ಇದು ಇನ್ನೂ ಅಸ್ತಿತ್ವದಲ್ಲಿರುವುದು ವಿಷಾದನೀಯ. ಈ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಾಗೂ ಅಧಿಕಾರಿಯ ಸಂವಿಧಾನಾತ್ಮಕ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಅವರು ಸಂವಿಧಾನದ ಮಹತ್ವವನ್ನು ಒತ್ತಿ ಹೇಳುತ್ತ ಭಾರತೀಯ ಸಂವಿಧಾನದ ೧೪ನೇ ವಿಧಿಯಡಿ ನಾವೆಲ್ಲರೂ ಸಮಾನತೆಯ ಹಕ್ಕನ್ನು ಹೊಂದಿದ್ದೇವೆ. ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಸಮಾಜದಲ್ಲಿ ಇಂದಿಗೂ ಜಾತಿ ಪದ್ಧತಿ, ಜೀತ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಹಾಗೂ ಕಡಿಮೆ ವೇತನ, ಬಲವಂತದ ದುಡಿಮೆಯಂತಹ ಆರ್ಥಿಕ ಶೋಷಣೆಗಳು ಕಂಡುಬರುತ್ತಿವೆ. ಇವುಗಳನ್ನು ತಡೆಗಟ್ಟಲು ಕಾನೂನುಗಳು ಇನ್ನಷ್ಟು ಬಲಗೊಳ್ಳಬೇಕಿದೆ.
೧೯೭೬ರ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯಡಿ ಜೀತದಾಳುಗಳನ್ನು ಗುರುತಿಸಿ, ಅವರನ್ನು ಶೋಷಣೆಯಿಂದ ಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳಿಗೆ ವ್ಯಾಪಕ ಅಧಿಕಾರವಿದೆ.
ಜೀತ ಪದ್ಧತಿಯಿಂದ ಮುಕ್ತರಾದವರಿಗೆ ದೈಹಿಕ ಮತ್ತು ಮಾನಸಿಕ ನೆರವು ನೀಡುವುದು ಹಾಗೂ ಅವರ ಪುನರ್ವಸತಿಗೆ ಶ್ರಮಿಸುವುದು ವಿವಿಧ ಇಲಾಖೆಗಳ ೫೨ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಇದನ್ನು ಕೇವಲ ಕೆಲಸವೆಂದು ಭಾವಿಸದೆ, ಒಂದು ಪವಿತ್ರ ಕರ್ತವ್ಯವೆಂದು ಪರಿಗಣಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಿAದ ಮೆಕ್ಕೆ ವೃತ್ತದ ವರೆಗೆ ಜಾಥಾ ಹಾಗೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಪ್ರವೀಣ್ ಪಿ ಬಾಗೇವಾಡಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್. ನಟೇಶ್, ಕೋಲಾರ ಡಿ.ವೈ.ಎಸ್.ಪಿ, ವಿ .ಕೃಷ್ಣಪ್ಪ, ಉಪ ವಿಭಾಗಾಧಿಕಾರಿಗಳು ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಶಾಂತ ಜೀವ ಜ್ಯೋತಿ ಎನ್.ಜಿ.ಒ, ನಿರ್ದೇಶಕರಾದ ಷಣ್ಮುಖ ಸುಂದರ, ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್