ಶಿವಜ್ಞಾನದ ಬೆಳಕಿನಿಂದ ಭವ ಬಂಧನ ದೂರ: ರಂಭಾಪುರಿ ಜಗದ್ಗುರುಗಳು
ಗದಗ, 17 ಫೆಬ್ರವರಿ (ಹಿ.ಸ.) ಆ್ಯಂಕರ್: ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಹೃದಯ ಹೃದ್ಭೂಮಿ ಭಗವಂತನಿಗಿರುವ ಗುಡಿ. ಶಿವಜ್ಞಾನದ ಬೆಳಕಿನಿಂದ ಮನುಷ್ಯನ ಭವ ಬಂಧನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ
ಫೋಟೋ


ಗದಗ, 17 ಫೆಬ್ರವರಿ (ಹಿ.ಸ.)

ಆ್ಯಂಕರ್: ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಹೃದಯ ಹೃದ್ಭೂಮಿ ಭಗವಂತನಿಗಿರುವ ಗುಡಿ. ಶಿವಜ್ಞಾನದ ಬೆಳಕಿನಿಂದ ಮನುಷ್ಯನ ಭವ ಬಂಧನ ದೂರವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಭೌತಿಕ ಸಿರಿ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮ ಸಂಪತ್ತು ನಿಜವಾದ ಸಂಪತ್ತು. ದೇವರಿಲ್ಲದ ಜಾಗ ಎಲ್ಲಿಯೂ ಇಲ್ಲ. ಮಲಿನಗೊಂಡ ಮನಸ್ಸಿಗೆ ಶಿವಜ್ಞಾನದ ಬೀಜ ಬಿತ್ತಿ ಮಾಧುರ್ಯದ ಫಲಗಳನ್ನು ಪಡೆದುಕೊಳ್ಳಬೇಕು. ಆಶೆ ಆಮಿಷ ಅಳಿದು ಎಚ್ಚರದಿಂದ ಈ ಭವ ಸಾಗರ ದಾಟಬೇಕಾಗಿದೆ. ದುಷ್ಟ ಜನರ ಸಹವಾಸ ಬಿಟ್ಟು ಭವ ಬಂಧನ ಬಿಡಿಸುವ ಗುರುವನ್ನು ಕೂಡಿ ಬಾಳೋ ಎಂದು ಮಹಾನುಭಾವರು ಎಚ್ಚರಿಸಿದ್ದಾರೆ. ಅರಿವಿಗಿಂತ ಆಚಾರ, ಅಧಿಕಾರಕ್ಕಿಂತ ಅಭಿಮಾನ, ಭೌತಿಕ ಸಂಪತ್ತಿಗಿಂತ ಆರೋಗ್ಯ, ಮಾನ ಸನ್ಮಾನಕ್ಕಿಂತ ಸಂಸ್ಕಾರ ಬಹಳ ಮುಖ್ಯವೆಂದು ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ.

ಬಾಳಿನ ಬನ ಚಿಗುರಲು ಗುರು ಕಾರುಣ್ಯ ಕಿರಣ ಮುಖ್ಯ. ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಭೂ ಲೋಕದ ಶಿವನಾಗಿ ಶಿವಪೂಜೆ ಮಾಡಿ ಭಕ್ತ ಸಂಕುಲವನ್ನು ಉದ್ಧರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಸಮಾರಂಭ ಉದ್ಘಾಟಿಸಿದ ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಮಾತನಾಡಿ ಗುರಿಯೆಡೆಗೆ ಸಾಗುವಾಗ ಸಾವಿರ ಸಂಕಷ್ಟಗಳು ಬಂದರೂ ಕುಗ್ಗದೇ ಮುನ್ನಡೆಯಬೇಕು. ಜಗದೊಡೆಯನ ಧ್ಯಾನ ಮಾಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸದಾ ಶ್ರಮಿಸುವೆ ಎಂದರು.

ನೇತೃತ್ವ ವಹಿಸಿದ ಮುಕ್ತಿಮಂದಿರ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮೃತ್ಯು ಮಾನವರಿಗಷ್ಟೇ ಅಲ್ಲ. ಮಹಾತ್ಮರಿಗೂ ಬಿಟ್ಟಿಲ್ಲ. ಶಿವಮಂತ್ರ ಕೊಟ್ಟ ಗುರುವನ್ನು ಮರೆಯಬೇಡ. ಶ್ರದ್ಧೆ ನಿಷ್ಠೆ ಅನುಭಾವದಿಂದ ಬದುಕು ನಿರಾಳ. ಜೀವನದ ಶ್ರೇಯಸ್ಸಿಗೆ ಪರಿಶ್ರಮ ಮತ್ತು ಪ್ರಯತ್ನ ಮುಖ್ಯ. ಲಿಂ. ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಭಕ್ತರ ಬಾಳಿಗೆ ಅರಿವು ನೀಡಿ ಉದ್ಧರಿಸಿದ್ದನ್ನು ಮರೆಯಲಾಗದೆಂದರು.

ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮಾನವ ಜೀವನ ವೈವಿಧ್ಯಮಯದಿಂದ ಕೂಡಿದೆ. ವಿದ್ಯೆ ವಿವೇಚನೆ ಚಿಂತನೆ ಆತ್ಮ ವಿಶ್ಲೇಷಣೆ ಸತ್ಯ ಶುದ್ಧ ಧ್ಯೇಯಗಳು ಜೀವನದ ಶ್ರೇಯಸ್ಸಿಗೆ ಮಟ್ಟಿಲುಗಳು. ಗುರುವಿನಿಂದ ಅರಿವು ಪಡೆದು ಜೀವನ ಸಾಫಲ್ಯ ಮಾಡಿಕೊಳ್ಳಬೇಕೆಂದರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಫೆಬ್ರುವರಿ 27ರಿಂದ ಮಾರ್ಚ 1ರ ವರೆಗೆ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಸುಳ್ಳ, ಸಿದ್ಧರಬೆಟ್ಟ, ಹಿರೇವಡ್ಡಟ್ಟಿ, ಸಂಗೊಳ್ಳಿ, ಲಕ್ಷ್ಮೇಶ್ವರ, ಕಲಾದಗಿ ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಸುನೀಲ್ ಮಹಾಂತಶೆಟ್ಟರ, ವೀರೇಶ ಕೂಗು, ಚನಬಸಯ್ಯ ಹಿರೇಮಠ, ವಿಶ್ವನಾಥಯ್ಯ ಹಿರೇಮಠ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗದಗಿನ ಪಂಡಿತ ಡಾ||ರಾಜಗುರು ಗುರುಸ್ವಾಮಿ ಕಲಕೇರಿ ಸಂಗಡಿಗರು ಭಕ್ತಿ ಗೀತೆಗಳನ್ನು ಹಾಡಿದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭದ ನಂತರ ಮಲೆಬೆನ್ನೂರು ಸದ್ಭಕ್ತರಿಂದ ಅನ್ನ ದಾಸೋಹ ಜರುಗಿತು.

ಇದೇ ಸಂದರ್ಭದಲ್ಲಿ ಮುಕ್ತಿಮಂದಿರ ಕ್ಷೇತ್ರದಿಂದ ಲಕ್ಷ್ಮೇಶ್ವರದ ವರೆಗೆ ನಿರ್ಮಾಣಗೊಳ್ಳುತ್ತಿರುವ ಮುಂದುವರಿದ ಸಿ.ಸಿ. ರಸ್ತೆಗೆ ಶಾಸಕ ಚಂದ್ರು ಲಮಾಣಿ ಶಿಲಾನ್ಯಾಸ ನೆರವೇರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande