ವಿದ್ಯಾರ್ಥಿಗಳು ಮುಂದಿನ ಎಐ ತಂತ್ರಜ್ಞಾನಕ್ಕೆ ತಯಾರಾಗಬೇಕು: ವಿದ್ಯಾಶಂಕರ
ಗದಗ, 17 ಫೆಬ್ರವರಿ (ಹಿ.ಸ.) ಆ್ಯಂಕರ್:- 2030 ರ ವೇಳೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳು ಸಂಭವಿಸಲಿದ್ದು, ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಎಐ ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಗ್ರೀನ್ ಎನರ್ಜಿ, ಬಯೋಟೆಕ್ನಾಲಜಿ ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳಿಗೆ ಸಜ್ಜಾಗಬೇಕಾಗಿದ
ಫೋಟೋ


ಗದಗ, 17 ಫೆಬ್ರವರಿ (ಹಿ.ಸ.)

ಆ್ಯಂಕರ್:- 2030 ರ ವೇಳೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳು ಸಂಭವಿಸಲಿದ್ದು, ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಎಐ ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಗ್ರೀನ್ ಎನರ್ಜಿ, ಬಯೋಟೆಕ್ನಾಲಜಿ ಸೇರಿದಂತೆ ಭವಿಷ್ಯದ ತಂತ್ರಜ್ಞಾನಗಳಿಗೆ ಸಜ್ಜಾಗಬೇಕಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಉಪಕುಲಪತಿ ಡಾ. ಎಸ್. ವಿದ್ಯಾಶಂಕರ ಹೇಳಿದ್ದಾರೆ.

ಗದಗ‌ನ ನಗರದ ಶ್ರೀ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದ ತೋಂಟದಾರ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಕ್ಯಾಂಪಸ್‌ನಲ್ಲಿ ನೂತನ ಕಟ್ಟಡದ ಭೂಮಿಪೂಜೆ ಹಾಗೂ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಸಹಯೋಗದಲ್ಲಿ ನಿರ್ಮಿಸಲಾದ ಐಡಿಯಾ ಪ್ರಯೋಗಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ ಮತ್ತು ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರೆಡಿಟೇಶನ್ ಕೌನ್ಸಿಲ್ ನಂತಹ ಮಾನ್ಯತಾ ಸಂಸ್ಥೆಗಳು ಬೋಧನೆ, ಸಂಶೋಧನೆ ಹಾಗೂ ಮೂಲಸೌಕರ್ಯಗಳ ಜೊತೆಗೆ ವಿದ್ಯಾರ್ಥಿಗಳಿಗೆ ದೊರೆಯುವ ಉದ್ಯೋಗಾವಕಾಶಗಳನ್ನೂ ಮೌಲ್ಯಮಾಪನದ ಪ್ರಮುಖ ಅಂಶವಾಗಿ ಪರಿಗಣಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಉತ್ತಮ ಪ್ಲೇಸ್ಮೆಂಟ್‌ಗಳು ಮತ್ತು ಸಂಶೋಧನಾ ಚಟುವಟಿಕೆಗಳು ಸಂಸ್ಥೆಯ ಪ್ರತಿಷ್ಠೆ ಹೆಚ್ಚಿಸುತ್ತವೆ. ರ್‍ಯಾಂಕಿಂಗ್ ನಿರ್ಧಾರದಲ್ಲಿಯೂ ಪ್ಲೇಸ್ಮೆಂಟ್ ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿಸಿದರು.

2047ರ ಅಮೃತ ಮಹೋತ್ಸವದ ನಂತರದ ದಶಕ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ವಿಶ್ವ ಆರ್ಥಿಕತೆಯಲ್ಲಿ ದೇಶ ಪ್ರಮುಖ ಸ್ಥಾನ ಪಡೆಯುವ ಗುರಿ ಹೊಂದಿದೆ. ಇದಕ್ಕಾಗಿ ಯುವಜನತೆ ಆವಿಷ್ಕಾರ, ಸಂಶೋಧನೆ ಮತ್ತು ಸ್ಟಾರ್ಟ್‌ಅಪ್ ಚಟುವಟಿಕೆಗಳ ಮೂಲಕ ರಾಷ್ಟ್ರಾಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ದೂರವಿದ್ದು ಸಮಯದ ಮಹತ್ವ ಅರಿತು ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕು. ಹೊಸ ತಂತ್ರಜ್ಞಾನಗಳ ಅವಕಾಶಗಳನ್ನು ಗುರುತಿಸಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಬೇಕು. ಅಗತ್ಯ ಸೌಲಭ್ಯಗಳನ್ನು ಒದಗಿಸಲು ವಿಟಿಯು ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವುದು ಸಂಸ್ಥೆಯ ಧ್ಯೇಯವಾಗಿದೆ.

ಸಂಸ್ಥಾಪಕರಾದ ಲಿ. ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಆಶಯದಂತೆ ಬಡ ವಿದ್ಯಾರ್ಥಿಗಳಿಗಾಗಿ ಶೀಘ್ರದಲ್ಲೇ ಉಚಿತ ವಸತಿ ನಿಲಯ ಪ್ರಾರಂಭಿಸಲಾಗುವುದೆಂದು ತಿಳಿಸಿದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹೇಶ ಎಂ. ಅವಟಿ ಅವರು, ಸುಮಾರು ರೂ. 60 ಲಕ್ಷ ವೆಚ್ಚದಲ್ಲಿ ಸಹಯೋಗದೊಂದಿಗೆ ನಿರ್ಮಿಸಲಾದ ಐಡಿಯಾ ಪ್ರಯೋಗಾಲಯ ಹಾಗೂ ನೂತನ ಕಟ್ಟಡದ ವಿವರಗಳನ್ನು ನೀಡಿದರು.

ಹೊಸ ಕಟ್ಟಡದಲ್ಲಿ ಆಧುನಿಕ ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್‌ಗಳು, ತರಬೇತಿ ಹಾಗೂ ಪ್ಲೇಸ್ಮೆಂಟ್ ಕೇಂದ್ರಗಳು, ಸಭಾಂಗಣಗಳು, ಸ್ಟಾರ್ಟ್‌ಅಪ್ ಸ್ಪೇಸ್ ಮತ್ತು ಅಲ್ಯೂಮ್ನಿ ಗೇಸ್ಟ್ ಹೌಸ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಸಮಾರಂಭದ ಸಾನಿಧ್ಯವಹಿಸಿದ್ದ ಶಿರೋಳ ತೋಂಟದಾರ್ಯ ಮಠದ ಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಗ್ರಾಮೀಣ ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳು ಇನ್ನಷ್ಟು ವಿಸ್ತರಿಸಲಿ ಎಂದು ಹಾರೈಸಿದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ, ಸಂಸ್ಥೆಯ ಮಾಜಿ ನಿರ್ದೇಶಕ ಎಸ್.ಟಿ. ಪಾಟೀಲ, ಆಡಳಿತ ಮಂಡಳಿ ಸದಸ್ಯ ಡಾ. ರಾಜಶೇಖರ ಪವಾಡಶೆಟ್ಟರ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಡಾ. ಡಿ.ಬಿ. ರೇವಣಕರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಡಾ. ಜಯಶ್ರೀ ರಡ್ಡೇರ್ ನಿರೂಪಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande