
ಕೋಲಾರ, ೧೭ ಫೆಬ್ರವರಿ(ಹಿ.ಸ) :
ಆ್ಯಂಕರ್ : ನೀರು ಅತ್ಯಮೂಲ್ಯ ಸಂಪತ್ತಾಗಿದ್ದು, ಮುಂದಿನ ಪೀಳಿಗೆಗಾಗಿ ಇಂದು ಜಲ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು, ಜಿಲ್ಲಾ ಪಂಚಾಯತ್ ಸಿಇಒ ಪ್ರವೀಣ್ ಪಿ ಬಾಗೇವಾಡಿ ಹೇಳಿದರು.
ಜಲ ಸಂಚಾಯ್ ಜನ ಭಾಗೀದಾರಿ ೨.೦ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಕೇಂದ್ರೀಯ ಅಂತರ್ಜಲ ಮಂಡಳಿ, ಬೆಂಗಳೂರು ಇವರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯು ಯಾವುದೇ ನದಿ ಮೂಲಗಳಿಲ್ಲದ ಜಿಲ್ಲೆಯಾಗಿದ್ದು, ಹಾಗೂ ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಸುವುದು ನಮ್ಮಲ್ಲೆರ ಕರ್ತವ್ಯವಾಗಿದೆ ಎಂದು ಹೇಳಿದರು.
ಜಲ ಸಂರಕ್ಷಣೆ ಬಗ್ಗೆ ಮಾತನಾಡಿದ ಅವರು, ನೀರು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅತೀ ಕಡಿಮೆ ಇದ್ದು, ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಮತ್ತು ಜಲಮೂಲಗಳು ಬತ್ತುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಹೀಗಾಗಿ ಜಲ ಮೂಲಗಳನ್ನು ರಕ್ಷಣೆ ಮಾಡಿ, ಅಭಿವೃದ್ಧಿ ಪಡಿಸಿಬೇಕಿದೆ. ಜಿಲ್ಲೆಯಲ್ಲಿ ಜಲಕ್ಷಾಮದ ನಡುವೆಯೂ, ಇಲ್ಲಿನ ರೈತರು ಹನಿ ನೀರಾವರಿ ಮೂಲಕ ಉತ್ತಮವಾದ ಕೃಷಿ ಮಾಡುತ್ತಿದ್ದಾರೆ. ತರಕಾರಿ, ಹಣ್ಣು, ರೇಷ್ಮೆ ಬೆಳೆದು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದುವರೆದು ಜಲ ಸಂಚಾಯ್ ಜನ ಭಾಗಿಧಾರಿ-೧.೦ ಅಭಿಯಾನದಡಿ ೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯ ೧೮೨೫ ಗ್ರಾಮಗಳಲ್ಲಿ ೯೧೨೫ ಕಾಮಗಾರಿಗಳನ್ನು ಕೈಗೊಳ್ಳಲು ಗುರಿ ನೀಡಲಾಗಿತ್ತು. ಅದರಂತೆ ಜಿಲ್ಲೆ ಎಲ್ಲಾ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಒಟ್ಟು ೧೦೨೭೦ ಜಲ ಸಂರಕ್ಷಣೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ, ಜಲ ಶಕ್ತಿ ಪೋರ್ಟಲ್‌ನಲ್ಲಿ ದಾಖಲಿಸಲಾಗಿತ್ತು. ಗುರಿ ಮೀರಿ ಸಾಧನೆ ಮಾಡಿದ ಜಿಲ್ಲೆಯನ್ನು ಕೇಂದ್ರ ಜಲಶಕ್ತಿ ಮಂತ್ರಾಲಯ ಗುರುತಿಸಿ, ರಾಷ್ಪ್ರ ಪ್ರಶಸ್ತಿ ನೀಡಿದೆ.
ಪ್ರಸಕ್ತ ಸಾಲಿನಲ್ಲಿ ೩೦ ಸಾವಿರ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಳ್ಳುವ ಗುರಿ ಹೊಂದಲಾಗಿದ್ದು, ಈಗಾಗಲೇ ೧೫ ಸಾವಿರ ಕಾಮಗಾರಿಗಳನ್ನು ಜಲ ಸಂಚಾಯ್ ಜಲ ಭಾಗಿದಾರಿ ಪೋರ್ಟಲ್‌ನಲ್ಲಿ ದಾಖಲಿಸಲಾಗಿದೆ. ಈ ಮೂಲಕ ಜಲ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು, ಜಲ ಸಂರಕ್ಷಣೆ ಹಾಗೂ ಮಳೆ ನೀರಿನ ಸಂಗ್ರಹಣೆಯ0ತಹ ಚಟುವಟಿಕೆಗಳಲ್ಲಿ ಸಮುದಾಯದ ಭಾಗವಹಿಸುವಿಕೆ ಬಲಪಡಿಸಲು, ಜನರಿಗೆ ನೀರಿನ ಮಹತ್ವ, ಜಲ ಸಂರಕ್ಷಣೆ ವಿಧಾನಗಳ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತಾಡಿದ ಕೇಂದ್ರೀಯ ಅಂತರ್ಜಲ ಮಂಡಳಿಯ ಪ್ರಾದೇಶಿಕ ನಿರ್ದೇಶಕರಾದ ಜಿ.ಕೃಷ್ಣಮೂರ್ತಿ, ದೇಶದಲ್ಲಿ ಅತೀ ಹೆಚ್ಚು ಅಂತರ್ಜಲ ಬಳಸುವ ಜಿಲ್ಲೆಗಳಲ್ಲಿ ಕೋಲಾರ ಸಹ ಒಂದಾಗಿದೆ. ಆದರೆ ಕೆಲ ವರ್ಷಗಳಿಂದ ಉತ್ತಮವಾದ ಮಳೆ, ಹಾಗೂ ಕೆ.ಸಿ ವ್ಯಾಲಿ ನೀರಿನಿಂದ ಅಂತರ್ಜಲ ಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಸುವ ಪ್ರಮಾಣ ಕಡಿಮೆಯಾಗಿದೆ. ಜಲ ಸಂಪತ್ತಿನ ನಿರ್ವಹಣೆಯಲ್ಲಿ ಕೋಲಾರ ಜಿಲ್ಲೆಯ ರೈತರು, ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ಕೇಂದ್ರೀಯ ಅಂತರ್ಜಲ ಮಂಡಳಿಯು ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಜಲ ಸಂರಕ್ಷಣೆ, ಅಂತರ್ಜಲ ಬಳಕೆ ಬಗ್ಗೆ ಪರಿಶೀಲಿಸಿ, ದತ್ತಾಂಶ ಸಂಗ್ರಹಿಸುತ್ತಿದೆ. ಹಲಾವರು ಇಲಾಖೆಗಳು ನೀರಿಗೆ ಸಂಬ0ಧಿಸಿದ0ತೆ ಪ್ರತ್ಯೇಕವಾಗಿ ದತ್ತಾಂಶಗಳನ್ನು ಹೊಂದಿವೆ. ಆದರೆ ಎಲ್ಲಾ ಇಲಾಖೆಗಳು ಸಹಯೋಗದೊಂದಿಗೆ ಒಟ್ಟಿಗೆ ಕೆಲಸ ಮಾಡಿದರೆ, ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಬಹುದು ಎಂದು ಅಭಿಪ್ರಾಯ ಪಟ್ಟದರು.
ಕಾರ್ಯಾಗಾರದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯ ವಿಜ್ಞಾನಿಗಳಿಂದ ವೈಜ್ಞಾನಿಕವಾಗಿ ಜಲ ಸಂರಕ್ಷಣೆ, ಅಂತರ್ಜಲ ಮಟ್ಟ ಸುಧಾರಣೆ, ದತ್ತಾಂಶ ಸಂಗ್ರಹಣೆ, ಬಳಕೆ, ಸಮುದಾಯ ಭಾಗವಿಸುವಿಕೆ ಹೆಚ್ಚಿಸಲು ಮಾಡಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಟಿ.ಕೆ ರಮೇಶ್, ರಘು . ಎಂ, ಕಾರ್ಯಪಾಲಕ ಅಭಿಯಂತರರು,ಗ್ರಾ.ಕು.ನೀ.ನೈ, ಸಹಾಯಕ ಯೋಜನಾಧಿಕಾರಿಯಾದ ಎಸ್.ವೆಂಕಟಚಲಪತಿ, ಹಿರಿಯ ಭೂ ವಿಜ್ಞಾನಿಗಳಾದ ಎ. ತಿಪ್ಪೇಸ್ವಾಮಿ, ಕೇಂದ್ರೀಯ ಅಂತರ್ಜಲ ಮಂಡಳಿ ವಿಜ್ಞಾನಿಗಳಾದ ಹೆಚ್.ಪಿ ಜಯಪ್ರಕಾಶ್, ಶಕ್ತಿವೇಲ್, ಶ್ರೀಮತಿ ಅನಾಕ ಅಜಯ್, ಅನಾಮಿಕಾ ಆಚಿ, ಡಾ. ಬೇಬಿ ಶ್ವೇತ, ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.
ಚಿತ್ರ : ಕೋಲಾರದಲ್ಲಿ ನಡೆದ ಜಲ ಸಂಚಾಯ್ ಜನ ಭಾಗೀದಾರರ ಸಭೆಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಾಗೇವಾಡಿ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್