
ಚಿತ್ರದುರ್ಗ, 17 ಫೆಬ್ರವರಿ (ಹಿ.ಸ.):
ಆ್ಯಂಕರ್:
ಪೊಲೀಸ್ ಠಾಣೆಗಳು ಕೇವಲ ಬಣ್ಣದ ಪೇಂಟಿಂಗ್ ಮತ್ತು ಬ್ಯಾನರ್‌ಗಳಿಂದ ಮಕ್ಕಳ ಸ್ನೇಹಿಯಾಗುವುದಿಲ್ಲ. ಸಂಕಷ್ಟದಲ್ಲಿರುವ ಮಕ್ಕಳನ್ನು ತಮ್ಮದೇ ಮಗುವೆಂದು ಭಾವಿಸಿ ಸಂವೇದನಾಶೀಲವಾಗಿ ಸ್ಪಂದಿಸಿದಾಗ ಮಾತ್ರ ವ್ಯವಸ್ಥೆ ಸುಧಾರಿಸುತ್ತದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೇಸ್ವಾಮಿ ಹೇಳಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಜೆಪಿಯು ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಪ್ರಕರಣಗಳನ್ನು ನಿರ್ವಹಿಸುವಾಗ ಅಧಿಕಾರಕ್ಕಿಂತ ಮಾನವೀಯತೆ ಮತ್ತು ಸಂವೇದನಾಶೀಲತೆ ಮುಖ್ಯ. ಠಾಣೆಗೆ ಬರುವ ಮಕ್ಕಳೊಂದಿಗೆ ಅಧಿಕಾರಿಗಳ ವರ್ತನೆ ನ್ಯಾಯ ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ಮಕ್ಕಳ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಕಾಪಾಡಲು ಸಾಧ್ಯವೆಂದರು. “ತೆರೆದ ಮನೆ” ಕಾರ್ಯಕ್ರಮದ ಪರಿಣಾಮವಾಗಿ ಬಾಲ್ಯ ವಿವಾಹ ತಡೆಯಲು ಮಕ್ಕಳೇ ಧೈರ್ಯವಾಗಿ ಮುಂದೆ ಬರುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್. ವಿಜಯಕುಮಾರ್ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 3,800ಕ್ಕೂ ಹೆಚ್ಚು ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿರುವುದು ಗಂಭೀರ ವಿಷಯ. ಆದರೆ ಅಲ್ಪ ಪ್ರಮಾಣದ ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್ ದಾಖಲಾಗುತ್ತಿರುವುದು ಕಳವಳಕಾರಿ ಎಂದರು. 18 ವರ್ಷದೊಳಗಿನ 54,000 ಹೆಣ್ಣುಮಕ್ಕಳ ಸಮೀಕ್ಷೆ ನಡೆಸಿ, ಪೋಷಕರಿಂದ ಬಾಲ್ಯ ವಿವಾಹ ಮಾಡದಿರಲು ಲಿಖಿತ ಮುಚ್ಚಳಿಕೆ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಬಾಲ್ಯ ವಿವಾಹದ ಸುಳಿವು ಸಿಕ್ಕರೂ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಕೇವಲ ವರನ ಮೇಲೆ ಮಾತ್ರವಲ್ಲ, ಮದುವೆಗೆ ಪ್ರೇರೇಪಿಸುವ ಪೋಷಕರ ಮೇಲೂ ಸಂಬಂಧಿತ ಕಾಯ್ದೆಗಳಡಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa