
ಗದಗ, 17 ಫೆಬ್ರವರಿ (ಹಿ.ಸ.)
ಆ್ಯಂಕರ್: ಗಾಣಿಗ ಸಮಾಜವು ಕಾಯಕಾಧಾರಿತ ಸಮಾಜವಾಗಿದ್ದು, ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಗಾಣದ ಎಣ್ಣೆ ತಯಾರಿಕೆಯನ್ನು ವೃತ್ತಿಯಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಕಾಲಬದಲಾವಣೆಯೊಂದಿಗೆ ಇಂದು ಆ ಮೂಲ ವೃತ್ತಿ ನಶಿಸಿ ಹೋಗಿದ್ದು, ಗಾಣಿಗ ಸಮಾಜದ ಬಹುಪಾಲು ಕುಟುಂಬಗಳು ಕೃಷಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿವೆ. ಸಮಾಜದಲ್ಲಿ ಬಡವರು, ಶ್ರಮಿಕರು ಹೆಚ್ಚಿದ್ದು, ಸಮರ್ಪಕ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಕೊರತೆಯಿಂದ ಅನೇಕ ಯುವಕರು ನಿರುದ್ಯೋಗಿಗಳಾಗಿದ್ದಾರೆ.
ಗ್ರಾಮೀಣ ಭಾಗದ ಯುವಕರು ಜೀವನ ನಿರ್ವಹಣೆಗೆ ಉದ್ಯೋಗಕ್ಕಾಗಿ ದೊಡ್ಡ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಮಾಜದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಗಾಣಿಗ ನಿಗಮ ಮಂಡಳಿಯನ್ನು ಸ್ಥಾಪಿಸಿತ್ತು. ಆದರೆ ನಿಗಮಕ್ಕೆ ಸಮರ್ಪಕ ಅನುದಾನ ದೊರಕದೆ ಉದ್ದೇಶ ಸಾಕಾರಗೊಳ್ಳದೇ ಉಳಿದಿದೆ.
ಈ ಹಿನ್ನೆಲೆಯಲ್ಲಿ, ಗಾಣಿಗ ನಿಗಮಕ್ಕೆ ಜೀವ ತುಂಬುವ ನಿಟ್ಟಿನಲ್ಲಿ ಸುಮಾರು 500ರಿಂದ 1,000 ಕೋಟಿ ರೂಪಾಯಿ ಅನುದಾನವನ್ನು ಬರುವ ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಗಾಣಿಗ ಸಮಾಜದ ಶ್ರಮಿಕರಿಗೆ ಬಲ ತುಂಬುವ ಕೆಲಸವನ್ನು ನಿಗಮದ ಮೂಲಕ ಕೈಗೊಳ್ಳಬೇಕು ಎಂದು ಗದಗ ಜಿಲ್ಲಾ ಗಾಣಿಗ ಸಮಾಜದ ಸಹ ಕಾರ್ಯದರ್ಶಿ ಸುರೇಶ ಮರಳಪ್ಪನವರು ಆಗ್ರಹಿಸಿದ್ದಾರೆ.
ರಾಜ್ಯದ ಗಾಣಿಗ ಸಮಾಜದ ಶಾಸಕರು, ಮಾಜಿ ಶಾಸಕರು ಹಾಗೂ ಗುರುಹಿರಿಯರು ಪಕ್ಷಾತೀತವಾಗಿ ಒಂದಾಗಿ, ಬಜೆಟ್‌ನಲ್ಲಿ ಗಾಣಿಗ ನಿಗಮಕ್ಕೆ ಸಮರ್ಪಕ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಮನವಿ ಮಾಡಿದ್ದಾರೆ. ಬರುವ ಬಜೆಟ್‌ನಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಗಾಣಿಗ ಸಮಾಜಕ್ಕೆ ನ್ಯಾಯ ಒದಗಿಸಲಿದೆ ಎಂಬ ನಿರೀಕ್ಷೆಯನ್ನು ಸಮಾಜದ ಜನರು ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP