ಶಿಕ್ಷಣದ ಮೂಲಕ ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿ: ಸಚಿವ ಎಚ್.ಕೆ.ಪಾಟೀಲ
ಗದಗ, 17 ಫೆಬ್ರವರಿ (ಹಿ.ಸ.) ಆ್ಯಂಕರ್: ಇಂದಿನ ಜಾಗತಿಕ ಯುಗದಲ್ಲಿ ಶಿಕ್ಷಣ ಬಹು ಮುಖ್ಯವಾಗಿದ್ದು ಲಂಬಾಣಿ ಜನಾಂಗ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಉತ್ತಮ ಸಮಾಜ, ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರ
ಫೋಟೋ


ಗದಗ, 17 ಫೆಬ್ರವರಿ (ಹಿ.ಸ.)

ಆ್ಯಂಕರ್:

ಇಂದಿನ ಜಾಗತಿಕ ಯುಗದಲ್ಲಿ ಶಿಕ್ಷಣ ಬಹು ಮುಖ್ಯವಾಗಿದ್ದು ಲಂಬಾಣಿ ಜನಾಂಗ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಉತ್ತಮ ಸಮಾಜ, ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಹೇಳಿದರು.

ಗದಗ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿಂದು ಜರುಗಿದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತಿ, ನಾಗರಿಕ ಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದನ್ನು ನಾವು ತಾಂಡಾಗಳಲ್ಲಿ ಕಾಣಬಹುದಾಗಿದೆ. ಲಂಬಾಣಿ ಸಮುದಾಯ ಬಹುದೊಡ್ಡ ಸಮುದಾಯವಾಗಿದೆ. ದೇಶದಲ್ಲಿ ಸುಮಾರು ಹನ್ನೆರೆಡು ಕೋಟಿಯಷ್ಟು ಜನಸಂಖ್ಯೆ ಹೊಂದಿದೆ. ಜಿಲ್ಲೆಯಲ್ಲಿ ಅನೇಕ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿದೆ. ಇತ್ತೀಚಿಗೆ 19 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಹಕ್ಕು ಪತ್ರ ವಿತರಿಸಲಾಗಿದೆ ಎಂದರು.

ಲಂಬಾಣಿ ಸಮುದಾಯವು ಇಂದಿಗೂ ಸಹ ತಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡದೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯವಾಗಿದ್ದು ಇದಕ್ಕೆ ಸಂತ ಸೇವಾಲಾಲರು ಪ್ರೇರಣೆಯಾಗಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನಪ್ರಾತಿನಿದ್ಯ ವ್ಯವಸ್ಥೆಯಡಿ ಲಂಬಾಣಿ ಸಮುದಾಯ ತಮ್ಮದೇ ಆದಂತಹ ವ್ಯವಸ್ಥೆಯನ್ನು ಹೊಂದಿದೆ. ತಮ್ಮ ಸಮುದಾಯದ ಹಿರಿಯರಿಗೆ ನೀಡುವಂತಹ ಗೌರವ ಸಮಾಜಕ್ಕೆ ಮಾದರಿಯಾಗಿದೆ.

ಲಂಬಾಣಿ ಸಮುದಾಯ ಕೊಟ್ಟ ಮಾತನ್ನು ಉಳಿಸಕೊಳ್ಳುವ, ಸ್ವಾಭಿಮಾನದ ಸಂಕೇತಕ್ಕೆ ಮಾದರಿಯಾದಂತಹ ಸಮುದಾಯವಾಗಿದ್ದು ಪ್ರತಿ ವರ್ಷವು ಇದೇ ರೀತಿ ಒಗ್ಗಟ್ಟಿನಿಂದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮವನ್ನು ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಕರೆ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ.ಹರಿಲಾಲ ಪವಾರ ಅವರು ಮಾತನಾಡಿ ಸಂತ ಸೇವಾಲಾಲರ ಕುರಿತು ಉಪನ್ಯಾಸ ನೀಡಿ ಮುಂಬರುವ ದಿನಗಳಲ್ಲಿ ಸಂತ ಸೇವಾಲಾಲರ ಜಯಂತಿಯನ್ನು ರಾಷ್ಟಾçದ್ಯಂತ ಆಚರಿಸಲು ಹಾಗೂ ಲಂಬಾಣಿ ಸಮುದಾಯ ವಲಸೆ ಹೋಗದಂತೆ ಅವರಿಗಾಗಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೋಹನ ಜಗದೀಶ್,ಅಪರ ಜಿಲ್ಲಾಧಿಕಾರಿ ಡಾ.ದುರಗೇಶ.ಕೆ.ಆರ್.,ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ.ಎಂ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಬಸವರಾಜ ಬಳ್ಳಾರಿ, ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಹಿರಿಯರಾದ ಶಿವಪ್ಪ ನಾಯಕ ಸೇರಿದಂತೆ ಸಮಾಜದ ಗಣ್ಯರು, ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಬಾಬು ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ ಅಲಕೋಡ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande