
ಚಿತ್ರದುರ್ಗ, 16 ಫೆಬ್ರವರಿ (ಹಿ.ಸ.):
ಆ್ಯಂಕರ್:ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಹೆಚ್ಚಿನ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 3.20 ಲಕ್ಷ ಅಸಂಘಟಿತ ಕಾರ್ಮಿಕರಿದ್ದರೂ ಕೇವಲ 7,500 ಮಂದಿ ಮಾತ್ರ ಯೋಜನೆಗೆ ನೋಂದಾಯಿಸಿರುವುದು ವಿಷಾದನೀಯ ಎಂದು ಹೇಳಿದರು. ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ನೇಕಾರರು, ಬಿಸಿಯೂಟ ತಯಾರಿ ಸಿಬ್ಬಂದಿ, ಮೀನುಗಾರರು ಸೇರಿದಂತೆ ವಿವಿಧ ವಲಯದ ಕಾರ್ಮಿಕರನ್ನು ವ್ಯಾಪ್ತಿಗೆ ತರಲು ಇಲಾಖೆಗಳಿಂದ ವಿಶೇಷ ಪ್ರಯತ್ನ ಅಗತ್ಯವಿದೆ ಎಂದರು.
18ರಿಂದ 40 ವರ್ಷ ವಯಸ್ಸಿನೊಳಗಿನ, ಮಾಸಿಕ ರೂ.15,000ಕ್ಕಿಂತ ಕಡಿಮೆ ಆದಾಯ ಹೊಂದಿರುವ ಅಸಂಘಟಿತ ಕಾರ್ಮಿಕರು ಯೋಜನೆಗೆ ಅರ್ಹರು. 60 ವರ್ಷ ನಂತರ ತಿಂಗಳಿಗೆ ರೂ.3,000 ಪಿಂಚಣಿ ಲಭ್ಯವಾಗಲಿದೆ. ಅರ್ಹರು ಕಾಮನ್ ಸರ್ವಿಸ್ ಸೆಂಟರ್‌ಗಳಲ್ಲಿ ಆಧಾರ್ ಮತ್ತು ಬ್ಯಾಂಕ್ ವಿವರಗಳೊಂದಿಗೆ ನೋಂದಾಯಿಸಬಹುದು ಎಂದು ತಿಳಿಸಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa