
ವಿಜಯಪುರ, 16 ಫೆಬ್ರವರಿ (ಹಿ.ಸ.):
ಆ್ಯಂಕರ್: ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸಾಲದ ಹೊರೆಯನ್ನು ಜನಸಾಮಾನ್ಯರಿಗೆ ಹೊರೆಸುತ್ತಿದ್ದು, ಪ್ರತಿ ವರ್ಷ ಒಂದೂವರೆ ಲಕ್ಷ ಕೋಟಿ ರೂ. ಅಂದರೆ ದಿನಕ್ಕೆ ೩೦೦ ಕೋಟಿ ರೂ. ಸಾಲ ಮಾಡುತ್ತಿದೆ. ಸಾಲವನ್ನು ಹೊರೆಸಿದ್ದೇ ಸರ್ಕಾರದ ದೊಡ್ಡ ಕೊಡುಗೆ ಹಾಗೂ ಸಾಧನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗುಡುಗಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ನಿತ್ಯ ಕುರ್ಚಿ ಕಚ್ಚಾಟ, ಶಾಸಕರ ಬಲದೊಂದಿಗೆ ಶಕ್ತಿ ಪ್ರದರ್ಶನದಲ್ಲಿಯೇ ಸರ್ಕಾರ ಕಾಲಹರಣ ಮಾಡುತ್ತಿದ್ದು, ಜನರ ಬೆವರಿನ ರೂಪದ ತೆರಿಗೆ ಹಣ ಪೋಲಾಗುತ್ತಿದೆ ಎಂದರು.
ನಮ್ಮ ಶಕ್ತಿ ಬಿಜೆಪಿಗೆ ಧಾರೆ ಎರೆದಿದ್ದೇವೆ, ಬಿಜೆಪಿ ಶಕ್ತಿ ನಮಗೆ ಧಾರೆ ಎರೆದಿದ್ದಾರೆ. ಭ್ರಷ್ಟ ಕಾಂಗ್ರೆಸ್ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತಿದ್ದೇವೆ, ಹೀಗಾಗಿ ಮರ್ಜ್ ಆಗುವ ಪ್ರಶ್ನೆಯೇ ಇಲ್ಲ. ನಾವು ಮೈತ್ರಿಯ ಪ್ಲೆöÊಟ್ ಹತ್ತಿದ್ದೇವೆ, ಅದು ಟರ್ಬ್ಯೂಲೆನ್ಸ್ ಆಗುವುದು ಸಹಜ, ಮಧ್ಯದಲ್ಲಿ ಕೆಲವು ಪ್ರಯಾಣಿಕರು ಇಳಿಯುವಂತೆ ಹೇಳಿದರೆ ಅದು ಸಾಧ್ಯವಾಗದು, ಇನ್ನೂ ಜೆಡಿಎಸ್ ಸೈದ್ಧಾಂತಿಕವಾಗಿ ರಾಜಿಯಾಗಿಲ್ಲ, ಸೆಕ್ಯೂಲರಿಸ್‌ಂ ನಮ್ಮ ಹೃದಯಲ್ಲಿದೆ ಎಂದರು.
ಕೆಲವೊAದು ಅಸಮಾಧಾನ ಬರಬಹುದು, ಅದನ್ನು ವರಿಷ್ಠರು ಸಮಾಧಾನ ಮಾಡುತ್ತಾರೆ, ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಸಹ ಅದನ್ನು ಅವರು ಸರಿ ಪಡಿಸುತ್ತಾರೆ. ಸೈದ್ಧಾಂತಿಕವಾಗಿ ನಾವು ಎಂದೂ ಬದಲಾಗಿಲ್ಲ, ಬಿಜೆಪಿ ಜೊತೆ ಕೈ ಜೋಡಿಸಿದ ಮಾತ್ರಕ್ಕೆ ಸೆಕ್ಯೂಲರಿಸಂ ಕೈ ಬಿಟ್ಟಿಲ್ಲ ಎಂದರು.
ಸಿದ್ದರಾಮಯ್ಯ ಅವರನ್ನು ದೇವೆಗೌಡರು ಅಂದು ಉಪ ಮುಖ್ಯಮಂತ್ರಿ ಮಾಡದೇ ಹೋಗಿದ್ದರೆ ಅವರು ಇಂದು ಮುಖ್ಯಮಂತ್ರಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ, ಸರ್ವ ಜನಾಂಗಕ್ಕೂ ರಾಜಕೀಯ ಶಕ್ತಿ ತುಂಬಿದ್ದು ಜೆಡಿಎಸ್ ಎಂದರು.
ರಾಜ್ಯದಲ್ಲಿರುವ ಹಾಲಿ ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದಲ್ಲಿರುವ ಶೇ.೩೦ ರಷ್ಟು ಸಚಿವರೆಲ್ಲರೂ ಜನತಾ ದಳದ ಪ್ರಾಡೆಕ್ಟಗಳೇ, ಜನತಾ ದಳ ನಾಯಕರನ್ನು ರೂಪಿಸುವ ಕಾರ್ಖಾನೆ, ಜೆಡಿಎಸ್ ಇನ್ನೂ ಸಶಕ್ತವಾಗಿದೆ, ಸಧೃಡವಾಗಿದೆ, ಕಾರ್ಯಕರ್ತರದಲ್ಲಿಯೂ ಪಕ್ಷದ ಬಗ್ಗೆ ಅಚಲವಾದ ವಿಶ್ವಾಸವಿದೆ ಎಂದರು.
ಹಳೇ ಮೈಸೂರು ಪ್ರಾಂತ್ಯದಲ್ಲಿ ನಮ್ಮ ಪ್ರಾಬಲ್ಯವಿದೆ, ಮಧ್ಯ ಕರ್ನಾಟಕ, ಕಿತ್ತೂರ ಕರ್ನಾಟಕದಲ್ಲಿಯೂ ಜೆಡಿಎಸ್ ಶಕ್ತಿ ಪ್ರಬಲವಾಗಿದೆ, ಹಳೆ ಮೈಸೂರು ಪ್ರಾಂತ್ಯದ ಪಾರ್ಟಿ ಎಂಬುದು ತಪ್ಪು ಕಲ್ಪನೆ ಎಂದರು.
೯ ಸಾವಿರ ಕಿ.ಮೀ. ರಾಜ್ಯ ಪ್ರವಾಸ ಮಾಡಿರುವೆ, ೫೪ ಹೆಚ್ಚು ವಿಧಾನಸಭಾ ಕ್ಷೇತ್ರ ಸಂಚರಿಸಿದ್ದೇನೆ, ಶಾಸಕನಾಗಬೇಕು, ಸಂಸದನಾಗಬೇಕು ಎಂಬ ಯಾವ ಗುರಿ ಇಲ್ಲ, ಪಕ್ಷ ಸಂಘಟನೆಯೇ ನನ್ನ ಗುರಿ ಎಂದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ, ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ದೇವಾನಂದ ಚವ್ಹಾಣ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಮುಖಂಡರಾದ ಅಪ್ಪುಗೌಡ ಪಾಟೀಲ ಮನಗೂಳಿ, ಎಸ್.ವಿ. ಪಾಟೀಲ ಸಿಂದಗಿ, ಬಿ.ಡಿ. ಪಾಟೀಲ ಹಂಜಗಿ, ಹನುಮಂತಪ್ಪ ಮಾವಿನಮರದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande