
ವಿಜಯಪುರ, 16 ಫೆಬ್ರವರಿ (ಹಿ.ಸ.)
ಆ್ಯಂಕರ್: ಸಾವಿನಲ್ಲಿಯೂ ಸಾರ್ಥಕತೆ ಮೆರೆದ ದಿ.ಬಲರಾಮ ಬಾಗಲಕೋಟ ಅವರಿಂದ ಪ್ರೇರಣೆ ಪಡೆದು, ಈ ವಿಷಯದ ಬಗ್ಗೆ ಅತ್ಯಂತ ಭಾವುಕರಾದ ಸಚಿವ ಎಂ.ಬಿ. ಪಾಟೀಲರು ಸ್ವತಃ ಅಂಗಾಂಗ ದಾನ ಮಾಡುವ ಘೋಷಣೆ ಮೂಲಕ ಬಸವನಾಡಿನಲ್ಲಿ ಅಂಗಾಂಗ ದಾನದ ಅಭಿಯಾನ ಆರಂಭಕ್ಕೆ ಹೊಸ ಸ್ವರೂಪ ನೀಡಿದರು.
ನಗರದ ಬಿಎಲ್‌ಡಿಇ ಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬಲರಾಮ ಬಾಗಲಕೋಟ ಅವರ ಕುಟುಂಬಕ್ಕೆ ಗೌರವ ಸಮರ್ಪಣೆ ನೆರವೇರಿಸಿದ ನಂತರ ಈ ಕುರಿತು ಸ್ಥಳದಲ್ಲಿಯೇ ಅವರು ಘೋಷಣೆ ಮಾಡಿದರು.
ದಿ.ಬಲರಾಮ ಅವರ ತ್ಯಾಗ ಅನುಪಮ, ಅವರಿಂದಲೇ ಬಸವನಾಡಿನಲ್ಲಿ ಅಂಗಾಂಗ ದಾನದ ಅಭಿಯಾನ ಆರಂಭವಾಗಿದೆ. ಇದಕ್ಕೆ ವಿಜಯಪುರ ಜಿಲ್ಲೆಯಿಂದ ನಾವೇ ನೇತೃತ್ವ ವಹಿಸಿಕೊಳ್ಳಲಿದ್ದು, ನಾನೇ ಸ್ವತಃ ಪ್ರಥಮ ಹೆಜ್ಜೆಯಾಗಿ ಮಿಷನ್ ಬಲರಾಮ್ ಎನ್ನುವ ಅಭಿಯಾನವನ್ನೇ ನಡೆಸಿ ಇದಕ್ಕೆ ನಾನೇ ಪ್ರಥಮವಾಗಿ ಅಂಗಾಂಗ ದಾನದ ವಾಗ್ದಾನ ಮಾಡುವೆ ಎಂದರು.
ಅಂಗಾಂಗ ದಾನ ಒಂದು ಪವಿತ್ರ ಕಾರ್ಯ, ಅಭಿಯಾನ ಆಗಿ ಇನ್ನೂ ಕಾರ್ಯಗತವಾಗಿಲ್ಲ, ಈ ಬಾಗಲಕೋಟ ಕುಟುಂಬದ ಸೇವಾ ಹೆಜ್ಜೆಯಿಂದ, ತ್ಯಾಗದಿಂದ ಈ ಅಭಿಯಾನ ಬಸವನಾಡಿನಿಂದ ಆರಂಭವಾಗಲಿ, ಆಸ್ಟ್ರೇಲಿಯಾ, ರಷ್ಯಾ, ಸ್ಪೇನ್, ಬೆಲ್ಜಿಯಂ, ಸಿಂಗಾಪೂರ, ಫ್ರಾನ್ಸ್, ಸಿಪ್ರಸ್, ಫಿನ್‌ಲ್ಯಾಂಡ್, ಪೋಲೆಂಡ್, ಪೋರ್ಚುಗಲ್, ಸ್ವೀಡನ್‌ನಲ್ಲಿ ಅಂಗಾಂಗ ದಾನ ಮಹತ್ವ ಪಡೆದಿದ್ದು, ನಮ್ಮ ದೇಶದಲ್ಲಿಯೂ ಜಾರಿಯಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರ ಎಂದರು.
ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿ ಅಗತ್ಯವಾಗಿದ್ದು, ಎರಡು ಸರ್ಕಾರಗಳು ಸಮನ್ವಯ ಸಾಧಿಸಿ ಅದರಲ್ಲೂ ಪ್ರಧಾನಮಂತ್ರಿಗಳು ಈ ವಿಷಯದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿದರೆ ಕೋಟ್ಯಂತರ ಜೀವಗಳಿಗೆ ಆಸರೆಯಾಗಬಹುದಾಗಿದೆ, ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು, ಕೇಂದ್ರ ಕಾನೂನು, ಕೇಂದ್ರ ಆರೋಗ್ಯ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು.
ದಿ.ಬಲರಾಮ ಬಾಗಲಕೋಟ ಅವರ ತ್ಯಾಗ ಅನನ್ಯ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಬಲರಾಮ ಅವರ ಕುಟುಂಬದಿಂದ ಈ ಒಂದು ಪ್ರೇರಣೆ ದೊಡ್ಡದು, ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು, ವಿಮಾನ ನಿಲ್ದಾಣದ ಸೌಲಭ್ಯವಿದ್ದರೆ ಶ್ವಾಸಕೋಶ, ಹೃದಯವನ್ನು ಸಹ ರವಾನೆ ಮಾಡಬಹುದಿತ್ತು ಎಂದರು.
ಬಿಎಲ್‌ಡಿಇ ವಿವಿ ಸಮ ಕುಲಪತಿ ಡಾ.ಅರುಣ ಇನಾಮದಾರ ಮಾತನಾಡಿ, ಅಂಗಾಂಗ ದಾನ ಎಂಬುದು ಜನಾಂದೋಲನದ ರೂಪ ಪಡೆಯಬೇಕಿದೆ, ಅನೇಕ ದೇಶಗಳಲ್ಲಿ ಅಂಗಾಂಗದಾನದ ಬಗ್ಗೆ ಸ್ಪಷ್ಟವಾದ ಮಹತ್ವ ಹಾಗೂ ನೀತಿ ಇದೆ, ಈ ನಿಟ್ಟಿನಲ್ಲಿ ಈ ತೆರನಾದ ನೀತಿಗಳು ರೂಪುಗೊಂಡರೆ ಕೋಟ್ಯಂತರ ಜೀವಿಗಳಿಗೆ ನೆರವಾಗಬಹುದು ಎಂದರು.
ಇದೇ ಸಂದರ್ಭ ಬಾಗಲಕೋಟ ಕುಟುಂಬಕ್ಕೆ ಹೆಲ್ತ್ ಕಾರ್ಡ್ ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande