

ಬಳ್ಳಾರಿ, 16 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮಿಲ್ಲರ್‍ಪೇಟೆಯ ನಾಲ್ಕು ರಸ್ತೆಗಳು ಒಗ್ಗೂಡುವಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಮಸೀದಿಯ ನಿರ್ಮಾಣವನ್ನು ತಡೆದು ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ನೀಡಲು ಕೋರಿ ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಹಾಗೂ ಮಹಾನಗರ ಪಾಲಿಕೆಗೆ ಸೋಮವಾರ ಮನವಿ ಸಲ್ಲಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರರೆಡ್ಡಿ ಅವರ ನೇತೃತ್ವದಲ್ಲಿ ಮಿಲ್ಲರ್‍ಪೇಟೆ ನಿವಾಸಿಗಳು ಮನವಿ ಸಲ್ಲಿಸಿದ್ದು, ಬಳ್ಳಾರಿ ನಗರದ 12ನೇ ವಾರ್ಡ್‍ನ ಮಿಲ್ಲರ್‍ಪೇಟೆಯ ಆಂಜನೇಯ ಸ್ವಾಮಿ ಗುಡಿ ಬೀದಿ, ಸೋಮಾದ್ರಿ ಬೀದಿ ಒಗ್ಗೂಡುವ ಕೊಲ್ಮಿಚೌಕ್ ವೃತ್ತಕ್ಕೆ ಹೋಗುವ ರಸ್ತೆಯಲ್ಲಿ ಐಸ್ ಫ್ಯಾಕ್ಟರಿ ಎದುರಿನ ನಾಲ್ಕು ರಸ್ತೆಗಳು ಕೂಡುವಲ್ಲಿ ಮಸೀದಿಯನ್ನು ಅನಧಿಕೃತವಾಗಿ - ಅಕ್ರಮವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಈ ಪ್ರದೇಶದ ನಿವಾಸಿಗಳ ಸಂಚಾರಕ್ಕೆ ಸಾಕಷ್ಟು ಅಡ್ಡಿ ಆಗುತ್ತಿದೆ. ಈ ಭಾಗದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಲಿದೆ. ಕಾರಣ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಮಸೀದಿ ನಿರ್ಮಾಣವನ್ನು ತಡೆದು, ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.
ಅನಧಿಕೃತವಾಗಿ - ಅಕ್ರಮವಾಗಿ ರಸ್ತೆಗೆ ಅಡ್ಡವಾಗಿ ಮಸೀದಿ ನಿರ್ಮಾಣ ಮಾಡುತ್ತಿರುವವರನ್ನು ಸ್ಥಳೀಯ ನಿವಾಸಿಗಳು ಸಂಪರ್ಕ ಮಾಡಿದಾಗ, ಮಹಾನಗರ ಪಾಲಿಕೆ ಪರವಾನಿಗೆ ನೀಡಿದೆ ಎಂದು ಸುಳ್ಳು ದಾಖಲೆಗಳನ್ನು ತೋರಿಸುತ್ತಿದ್ದಾರೆ. ಅದಿಕಾರಿಗಳು ರಸ್ತೆಗೆ ಅಡ್ಡವಾಗಿ ಮಸೀದಿ ನಿರ್ಮಾಣಕ್ಕೆ ಪರವಾನಿಗೆ ನೀಡಲು ಸಾಧ್ಯವೇ? ಅಧಿಕಾರಿಗಳು ಪರವಾನಿಗೆ ನೀಡಿದ್ದಲ್ಲಿ ಅಂಥಹಾ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್