
ವಿಜಯಪುರ, 16 ಫೆಬ್ರವರಿ (ಹಿ.ಸ.)
ಆ್ಯಂಕರ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
“ನಿಮ್ಮ ನಿಮ್ಮ ಮತಕ್ಷೇತ್ರಗಳತ್ತ ಮಾತ್ರ ಗಮನ ಕೊಡಿ, ವಿಜಯಪುರ–ಬಾಗಲಕೋಟೆ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಡಿ” ಎಂದು ವಿಜಯೇಂದ್ರ ಹೇಳಿದ್ದಕ್ಕೆ ಪ್ರತಿಯಾಗಿ, “ಅವರು ಮೊದಲು ತಮ್ಮ ಕ್ಷೇತ್ರವಾದ ಶಿಖಾರಿಪುರ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ. ಶಿಖಾರಿಪುರವೇ ಅಲುಗಾಡುತ್ತಿದೆ. ಮೈಸೂರು, ವರುಣಾ, ತುಮಕೂರು ನಗರ, ರಾಜಾಜಿನಗರ ಕಡೆ ಅಡ್ಡಾಡುವುದನ್ನು ಬಿಟ್ಟು ತಮ್ಮ ಕುರ್ಚಿ ಗಟ್ಟಿಯಾಗಿರಲಿ” ಎಂದು ಯತ್ನಾಳ ವ್ಯಂಗ್ಯವಾಡಿದರು.
ವಿಜಯೇಂದ್ರ ವಿಧಾನಸಭೆಯಲ್ಲಿ ಯಾವುದೇ ಪ್ರಮುಖ ವಿಚಾರಗಳ ಬಗ್ಗೆ ಗಟ್ಟಿಯಾಗಿ ಮಾತನಾಡಿಲ್ಲ. ಅಬಕಾರಿ ಹಗರಣದ ಬಗ್ಗೆ ಕೂಡ ಧ್ವನಿ ಎತ್ತಿಲ್ಲ. ಆರ್. ಅಶೋಕ್ ಮತ್ತು ಸುನೀಲ್ ಕುಮಾರ್ ಮಾತನಾಡಿದರೂ, ರಾಜ್ಯಾಧ್ಯಕ್ಷರು ಕಠೋರವಾಗಿ ಮಾತನಾಡಲಿಲ್ಲ ಎಂದು ಟೀಕಿಸಿದರು. ನಾನು ಸದನದಲ್ಲಿ ಸಿಎಂ–ಡಿಸಿಎಂ ವಿರುದ್ಧ ನೇರವಾಗಿ ಆರೋಪ ಮಾಡುತ್ತೇನೆ. ಕಳೆದ ಅಧಿವೇಶನದಲ್ಲಿ ವಿಜಯೇಂದ್ರ ಸದನದಲ್ಲೇ ಕೂತಿಲ್ಲ” ಎಂದು ಕುಟುಕಿದರು. ವಿಜಯೇಂದ್ರ ಜವಾಬ್ದಾರಿಯಲ್ಲಿ ವಿಫಲರಾಗಿದ್ದಾರೆ. ಮನೆಯಲ್ಲೇ ಇರೋದು ಒಳಿತು, ರಾಜೀನಾಮೆ ನೀಡುವುದು ಮಾತ್ರ ಪರಿಹಾರ” ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ವಿಚಾರಕ್ಕೆ ಸಂಬಂಧಿಸಿದಂತೆ ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧವೂ ಯತ್ನಾಳ ವಾಗ್ದಾಳಿ ನಡೆಸಿದರು. ಡಿಕೆ ಶಿವಕುಮಾರರಿಗೆ ಇದು ಕೊನೆಯ ಅವಕಾಶ. ಈಗಲೇ ಸಿಎಂ ಆಗಬೇಕೆಂದು ಓಡಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ, ಅವರಿಗೆ ಶಾಸಕರ ಬೆಂಬಲವಿದೆ” ಎಂದರು.
ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದರು. “ಕುರ್ಚಿ ಜಗಳದಿಂದ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ. ಅಂಥಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ” ಎಂದು ಹೇಳಿದರು. ಇನ್ನೂ ಮುಂದಿನ ಚುನಾವಣೆಯಲ್ಲಿ “ಜೆಸಿಬಿ ಪಕ್ಷ” ಅಖಾಡಕ್ಕಿಳಿಯಲಿದೆ ಎಂದು ಪರೋಕ್ಷವಾಗಿ ಹೇಳಿದ ಯತ್ನಾಳ, “2028ರಲ್ಲಿ ಬಿಜೆಪಿ ಸರ್ಕಾರ ಬರಲಿದೆಯೋ, ಯತ್ನಾಳ ಗೌಡನ ಸರ್ಕಾರ ಬರಲಿದೆಯೊ, ಜೆಸಿಬಿ ಸರ್ಕಾರ ಬರುತ್ತಾ ನೋಡೋಣ. ನಾನು ಕರ್ನಾಟಕ ಸಿಎಂ ಆಗೋದು ಖಚಿತ. ಮಾಧ್ಯಮಗಳ ಮುಂದೆ ಪ್ರಮಾಣವಚನ ಸ್ವೀಕರಿಸುವುದು ನಿಜ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯೇಂದ್ರ ಬದಲಾವಣೆ ಕುರಿತ ಸುದ್ದಿಗೆ ಪ್ರತಿಕ್ರಿಯಿಸಿ, “ಪಕ್ಷದ ಆಂತರಿಕ ವಿಚಾರ ಗೊತ್ತಿಲ್ಲ. ಅವರು ನವೆಂಬರ್‌ನಲ್ಲಿ ಬದಲಾಗುತ್ತಾರೋ, ಸೂರ್ಯ–ಚಂದ್ರರಿರೋವರೆಗೂ ಇರುತ್ತಾರೋ ಗೊತ್ತಿಲ್ಲ” ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande