
ನವದೆಹಲಿ, 08 ನವೆಂಬರ್ (ಹಿ.ಸ.):
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತ–ಚೀನಾ ಗಡಿ ಪ್ರದೇಶವಾದ ಸಿಕ್ಕಿಂನ ಶೆರೆಥಾಂಗ್ನಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸೈನಿಕರೊಂದಿಗೆ ಸಂವಾದ ನಡೆಸಿ, ದೇಶದ ಗಡಿ ಮತ್ತು ಸಾರ್ವಭೌಮತ್ವದ ರಕ್ಷಣೆಯಲ್ಲಿ ಅವರ ನಿಸ್ವಾರ್ಥ ಸೇವೆ, ಶಿಸ್ತು ಹಾಗೂ ಧೈರ್ಯವನ್ನು ಶ್ಲಾಘಿಸಿದರು.
ಶೆರೆಥಾಂಗ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಅವರು, ದೇಶದ ಭದ್ರತೆಗಾಗಿ ಸರ್ವೋಚ್ಚ ತ್ಯಾಗ ಮಾಡಿದ ವೀರ ಸೈನಿಕರಿಗೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು. ಬಳಿಕ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿ, ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ದೇಶದ ಗಡಿಗಳನ್ನು ರಕ್ಷಿಸುವ ಅವರ ಬದ್ಧತೆಯನ್ನು ಮೆಚ್ಚಿಕೊಂಡರು. ಇದೇ ವೇಳೆ ಬಾಬಾ ಹರ್ಭಜನ್ ಸಿಂಗ್ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಇಂದು ದೇಶದ ಜನರು ತಮ್ಮ ಮನೆಗಳಲ್ಲಿ ದೀಪಾವಳಿಯ ದೀಪಗಳನ್ನು ಬೆಳಗಿಸಲು ಸಾಧ್ಯವಾಗುತ್ತಿರುವುದಕ್ಕೆ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೀರ ಸೈನಿಕರ ತ್ಯಾಗವೇ ಕಾರಣವಾಗಿದೆ. ದೇಶದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಲು ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದು ಹೇಳಿದರು.
ಶೆರೆಥಾಂಗ್ನಲ್ಲಿ ನಿಂತಿರುವಾಗ ಪ್ರತಿಯೊಬ್ಬ ಸೈನಿಕರೂ ಒಂದೊಂದು ದೀಪದಂತೆ ಕಾಣುತ್ತಾರೆ. ಅವರ ಬೆಳಕು ಕೇವಲ ಈ ಗಡಿ ಠಾಣೆಗೆ ಸೀಮಿತವಾಗಿಲ್ಲ. ದೇಶದ ಪ್ರತಿಯೊಂದು ಮನೆಗೂ ತಲುಪುತ್ತಿದೆ. ತಂತ್ರಜ್ಞಾನ ಎಷ್ಟೇ ಆಧುನಿಕವಾಗಿದ್ದರೂ ಸೈನಿಕರಲ್ಲಿ ಶಿಸ್ತು ಮತ್ತು ಧೈರ್ಯ ಇಲ್ಲದಿದ್ದರೆ ಅದು ನಿಷ್ಪ್ರಯೋಜಕ. ಸೈನಿಕರ ಶಿಸ್ತೇ ಅವರ ಅತ್ಯಂತ ದೊಡ್ಡ ಶಕ್ತಿ ಎಂದು ಅಭಿಪ್ರಾಯಪಟ್ಟರು.
ಗಡಿ ಪ್ರದೇಶದಲ್ಲಿ ಸೈನಿಕರ ನಡವಳಿಕೆ, ಸಮವಸ್ತ್ರ, ಭಾಷೆ ಮತ್ತು ಸಂಯಮ ಸ್ಥಳೀಯ ಜನರ ಮನಸ್ಸಿನಲ್ಲಿ ಸೇನೆಯ ಬಗ್ಗೆ ಗೌರವದ ಭಾವನೆ ಮೂಡಿಸುತ್ತದೆ. ಶೆರೆಥಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಸೇನೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಆ ವಿಶ್ವಾಸ ಮತ್ತು ಪ್ರೀತಿಯನ್ನು ಉಳಿಸಿಕೊಳ್ಳುವುದು ಸೈನಿಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ದೀಪಾವಳಿಯ ಹಣತೆ ಯಾವುದೇ ಸದ್ದಿಲ್ಲದೆ ಕತ್ತಲಿನ ವಿರುದ್ಧ ಬೆಳಕು ಚೆಲ್ಲುವಂತೆ ಸೈನಿಕರ ಜೀವನವೂ ಇದೆ. ಅವರು ಹೆಚ್ಚು ಪ್ರಚಾರ ಮಾಡಿಕೊಳ್ಳದೆ ತಮ್ಮ ಕರ್ತವ್ಯದ ಮೂಲಕ ಇಡೀ ದೇಶಕ್ಕೆ ಭದ್ರತೆಯ ಭರವಸೆ ನೀಡುತ್ತಾರೆ. ದೇಶದ ಜನರು ಹಬ್ಬಗಳನ್ನು ಆಚರಿಸುವಾಗಲೂ ಸೈನಿಕರು ಗಡಿಯಲ್ಲಿ ಎಚ್ಚರಿಕೆಯಿಂದ ಕಾವಲು ಕಾಯುತ್ತಾರೆ. ಅವರಿಂದಾಗಿ ದೇಶದ ನಾಗರಿಕರು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಯುದ್ಧ ಸ್ಮಾರಕಗಳು ಸಾಮೂಹಿಕ ಸ್ಮೃತಿ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಸ್ಮಾರಕಗಳು ವೀರ ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ಮುಂದಿನ ಪೀಳಿಗೆಗಳಿಗೆ ಪರಿಚಯಿಸುವುದರ ಜತೆಗೆ ರಾಷ್ಟ್ರೀಯ ಹೆಮ್ಮೆ ಹಾಗೂ ಗೌರವದ ಭಾವನೆಯನ್ನು ಜಾಗೃತಗೊಳಿಸುತ್ತವೆ. ಶೆರೆಥಾಂಗ್ ಯುದ್ಧ ಸ್ಮಾರಕವು ಸೈನಿಕರ ಶೌರ್ಯವನ್ನು ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಿಸಿದೆ. ಎಷ್ಟೇ ಪೀಳಿಗೆಗಳು ಕಳೆದರೂ ಈ ಸ್ಥಳವು ಸೈನಿಕರ ಸಾಹಸ ಮತ್ತು ಬಲಿದಾನಕ್ಕೆ ಪ್ರೇರಣೆಯಾಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಭದ್ರತೆಯ ರಕ್ಷಣೆಗೆ ಸೈನಿಕರು ತೋರುತ್ತಿರುವ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದ ಅವರು, ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿದ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು. 'ಭಾರತ್ ಮಾತಾ ಕೀ ಜೈ' ಘೋಷಣೆಯೊಂದಿಗೆ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ಇದಕ್ಕೂ ಮುನ್ನ ನವೆಂಬರ್ 7ರಂದು ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಾಯುಪಡೆ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಜನಾಥ್ ಸಿಂಗ್, ಭಾರತೀಯ ವಾಯುಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಳಿಕ ಸಿಲಿಗುರಿಯ ಸುಕ್ನಾದಲ್ಲಿಯೂ ಭಾರತೀಯ ಸೇನೆಯ ಸೈನಿಕರೊಂದಿಗೆ ಸಂವಾದ ನಡೆಸಿದ್ದರು.
ಪ್ರವಾಸದ ಎರಡನೇ ದಿನವಾದ ಇಂದು ಬೆಳಿಗ್ಗೆ ಸಿಕ್ಕಿಂಗೆ ಆಗಮಿಸಿದ ರಕ್ಷಣಾ ಸಚಿವರನ್ನು ಗ್ಯಾಂಗ್ಟಕ್ ಜಿಲ್ಲಾಧಿಕಾರಿ ರೋಹನ್ ಅಗವಾನೆ, ಹಿರಿಯ ಪೊಲೀಸ್ ಅಧೀಕ್ಷಕ ಡಾ. ಛಿರಿಂಗ್ ನಾಮ್ಗ್ಯಾಲ್ ಗ್ಯಾತ್ಸೋ, ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಜಾನ್ ಗುರುಂಗ್ ಹಾಗೂ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
-------------
ಹಿಂದೂಸ್ತಾನ್ ಸಮಾಚಾರ್ / Rakesh.M.B.