ಆಡ್ವಾಣಿ ಜನ್ಮದಿನ: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹೋಮ; ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ
ನವದೆಹಲಿ, 08 ನವೆಂಬರ್ (ಹಿ.ಸ.): ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಹಾಗೂ ಭಾರತ ರತ್ನ ಪುರಸ್ಕೃತ ಲಾಲ್ ಕೃಷ್ಣ ಆಡ್ವಾಣಿ ಅವರ 99ನೇ ಜನ್ಮದಿನದ ಅಂಗವಾಗಿ ಭಾನುವಾರ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹೋಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸೇ
भाजपा के राष्ट्रीय अध्यक्ष नितिन नवीन


ನವದೆಹಲಿ, 08 ನವೆಂಬರ್ (ಹಿ.ಸ.):

ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಹಾಗೂ ಭಾರತ ರತ್ನ ಪುರಸ್ಕೃತ ಲಾಲ್ ಕೃಷ್ಣ ಆಡ್ವಾಣಿ ಅವರ 99ನೇ ಜನ್ಮದಿನದ ಅಂಗವಾಗಿ ಭಾನುವಾರ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹೋಮ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸೇರಿದಂತೆ ಪಕ್ಷದ ಹಲವು ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಡ್ವಾಣಿ ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಹೋಮದ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ಆಡ್ವಾಣಿ ಅವರು ಇಂದು ತಮ್ಮ ಜೀವನದ 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಬೆಳಿಗ್ಗೆ 10ರಿಂದ 10.30ರವರೆಗೆ ಹೋಮ ನಡೆಯಿತು. ಬಳಿಕ ಆಡ್ವಾಣಿ ಅವರ ಜೀವನ ಪಯಣ ಹಾಗೂ ಪ್ರಮುಖ ಭಾಷಣಗಳನ್ನು ಒಳಗೊಂಡ ವಿಡಿಯೊ ಪ್ರದರ್ಶನ ಏರ್ಪಡಿಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಜನ್ಮದಿನದ ಶುಭಾಶಯ ಕೋರಿದ ನಿತಿನ್ ನವೀನ್, ಜನಸಂಘದಿಂದ ಬಿಜೆಪಿಯವರೆಗೆ ಸಂಘಟನೆಯ ವಿಸ್ತರಣೆ ಹಾಗೂ ರಾಷ್ಟ್ರವಾದಿ ವಿಚಾರಧಾರೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಆಡ್ವಾಣಿ ಅವರ ಕೊಡುಗೆ ಅವಿಸ್ಮರಣೀಯ ಎಂದು ಸ್ಮರಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ಚಳವಳಿಯನ್ನು ಜನಾಂದೋಲನವನ್ನಾಗಿ ರೂಪಿಸುವಲ್ಲಿ ಆಡ್ವಾಣಿ ಅವರು ವಹಿಸಿದ ಪಾತ್ರವನ್ನು ಸ್ಮರಿಸಿದ ಅವರು, ಸಾರ್ವಜನಿಕ ಜೀವನದಲ್ಲಿನ ಆಡ್ವಾಣಿ ಅವರ ನೈತಿಕ ಶುದ್ಧತೆ ಮತ್ತು ಪಕ್ಷದ ಸಂಘಟನೆಯ ಬಗೆಗಿನ ಅಚಲ ನಿಷ್ಠೆ ಬಿಜೆಪಿ ಕಾರ್ಯಕರ್ತರಿಗೆ ಸದಾ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ಆಡ್ವಾಣಿ ಅವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ನಿತಿನ್ ನವೀನ್ ತಿಳಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande