
ಬೆಂಗಳೂರು, 03 ನವೆಂಬರ್ (ಹಿ.ಸ.):
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ಆರಂಭಕ್ಕೂ ಮುನ್ನವೇ ಭಾರಿ ಆರ್ಥಿಕ ಹೊರೆ ತಂದೊಡ್ಡಿದೆ.
2021ರಿಂದ 2026ರ ಅವಧಿಯಲ್ಲಿ ಯಾವುದೇ ಕಾಮಗಾರಿ ಆರಂಭವಾಗದಿದ್ದರೂ, ಈಗಾಗಲೇ ₹382 ಕೋಟಿ ವೆಚ್ಚ ಮಾಡಲಾಗಿದೆ.
ಇದರ ಬೆನ್ನಲ್ಲೇ ಯೋಜನೆಯ ಅಂದಾಜು ವೆಚ್ಚ ₹8,800 ಕೋಟಿಯಿಂದ ₹10,240 ಕೋಟಿಗೆ ಏರಿಕೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯೋಜನೆಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್, ಖರೀದಿ ಮತ್ತು ಗುತ್ತಿಗೆ ಪ್ರಕ್ರಿಯೆಗಳಿಗೆ ₹360 ಕೋಟಿ ಹಾಗೂ 2021ರಿಂದ 2024ರ ಅವಧಿಯಲ್ಲಿ ಸಿದ್ಧಪಡಿಸಲಾದ ವಿವರವಾದ ಯೋಜನಾ ವರದಿ (ಡಿಪಿಆರ್)ಗೆ ₹22 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಾಮಗಾರಿಯೇ ಆರಂಭವಾಗದಿದ್ದರೂ ನೂರಾರು ಕೋಟಿ ರೂಪಾಯಿ ವೆಚ್ಚವಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನವೆಂಬರ್ ಮೂರನೇ ವಾರದಲ್ಲಿ ನಡೆಯಲಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್ಬಿಡಬ್ಲ್ಯುಎಲ್) ಸಭೆಯಲ್ಲಿ ಯೋಜನೆಗೆ ಅನುಮೋದನೆ ದೊರೆಯುವ ನಿರೀಕ್ಷೆಯನ್ನು ಇಂಧನ ಇಲಾಖೆಯ ಕೆಲವು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ (ಎನ್ಐಎಎಸ್) ಸಲ್ಲಿಸಿರುವ ಯೋಜನಾ ವರದಿಯನ್ನೂ ಸಭೆಯಲ್ಲಿ ಪರಿಶೀಲಿಸುವ ಸಾಧ್ಯತೆಯಿದೆ.
ಆದರೆ, ಯೋಜನೆಗೆ ಅಂತಿಮ ಅನುಮತಿಗಳು ದೊರೆಯುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯಗಳು ಆದೇಶಿಸಿರುವುದರಿಂದ ಯೋಜನೆಯ ಅನುಷ್ಠಾನಕ್ಕೆ ಇನ್ನೂ ಹಾದಿ ಸುಗಮವಾಗಿಲ್ಲ.
ವಿಳಂಬದಿಂದ ಹೆಚ್ಚುತ್ತಿರುವ ಆರ್ಥಿಕ ಹೊರೆ
ಯೋಜನೆಯ ಅನುಷ್ಠಾನದಲ್ಲಿನ ವಿಳಂಬ ಹಾಗೂ ಪದೇಪದೇ ನಡೆಯುತ್ತಿರುವ ಸಮೀಕ್ಷೆಗಳಿಂದ ವೆಚ್ಚ ಹೆಚ್ಚಾಗುತ್ತಿದೆ. ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ಸರ್ಕಾರಕ್ಕೆ ಈ ಯೋಜನೆ ಬಿಳಿ ಆನೆಯಾಗಿ ಪರಿಣಮಿಸುವ ಆತಂಕವಿದೆ ಎಂದು ಯೋಜನೆ ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಯ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸದ ಷರತ್ತಿನಡಿ ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಂದೆಡೆ, ಪಶ್ಚಿಮ ಘಟ್ಟಗಳ ಸೂಕ್ಷ್ಮ ಹಾಗೂ ಪರಿಸರ ಸಂವೇದಿ ಪ್ರದೇಶದಲ್ಲಿ ಇಂತಹ ಬೃಹತ್ ಯೋಜನೆಯ ಅಗತ್ಯವೇನು ಎಂಬ ಪ್ರಶ್ನೆಯನ್ನು ಪರಿಸರ ತಜ್ಞರು ಎತ್ತಿದ್ದಾರೆ. ಯೋಜನೆಯ ವೆಚ್ಚವನ್ನು ಪದೇಪದೇ ಪರಿಷ್ಕರಿಸುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಿಂಗಳೀಕ ಸಂರಕ್ಷಿತ ಪ್ರದೇಶದಲ್ಲಿ 2,000 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಯೋಜನೆಯಿಂದ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ನ್ನು ನಿರ್ವಹಿಸಲು ರಾಜ್ಯದ ವಿದ್ಯುತ್ ಜಾಲವನ್ನು ಸಮರ್ಪಕವಾಗಿ ಮೇಲ್ದರ್ಜೆಗೇರಿಸಲಾಗಿದೆಯೇ ಎಂಬುದನ್ನೂ ತಜ್ಞರು ಪ್ರಶ್ನಿಸಿದ್ದಾರೆ.
ವೆಚ್ಚದ ಬಗ್ಗೆ ತನಿಖೆಗೆ ಶಂಕರ್ ಶರ್ಮಾ ಆಗ್ರಹ
ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯುತ್ ಮತ್ತು ಹವಾಮಾನ ನೀತಿ ವಿಶ್ಲೇಷಕ ಶಂಕರ್ ಶರ್ಮಾ, ಯೋಜನೆಗಾಗಿ ಈವರೆಗೆ ಮಾಡಿರುವ ವೆಚ್ಚದ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನ ಸೆಳೆಯಲು ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಯೋಜನೆಗಾಗಿ ಮಾಡಿರುವ ವೆಚ್ಚದ ಸಂಪೂರ್ಣ ವಿವರಗಳನ್ನು ಒದಗಿಸಬೇಕು ಹಾಗೂ ರಾಜ್ಯದ ವಿದ್ಯುತ್ ವಲಯಕ್ಕೆ ಈ ಯೋಜನೆಯ ಅಗತ್ಯವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪತ್ರದಲ್ಲಿ ಕೋರಿರುವುದಾಗಿ ಅವರು ಹೇಳಿದ್ದಾರೆ. ಆದರೆ, ಈವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಯೋಜನೆಗಾಗಿ ಈವರೆಗೆ ಖರ್ಚು ಮಾಡಿರುವ ₹382 ಕೋಟಿಯ ಬಗ್ಗೆ ಆರ್ಥಿಕ ಮತ್ತು ಆಡಳಿತಾತ್ಮಕ ತನಿಖೆ ನಡೆಸಬೇಕು. ತನಿಖೆಯ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಶರ್ಮಾ ಒತ್ತಾಯಿಸಿದ್ದಾರೆ.
ಇದಲ್ಲದೆ, ಪರಿಸರ ಅನುಮತಿ, ವನ್ಯಜೀವಿ ಅನುಮತಿ ಹಾಗೂ ಅರಣ್ಯ ಇಲಾಖೆಯ ಅನುಮತಿ ಸೇರಿದಂತೆ ಅಗತ್ಯ ಕಾನೂನುಬದ್ಧ ಒಪ್ಪಿಗೆಗಳನ್ನು ಪಡೆಯುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R