
ವಿಜಯಪುರ, 03 ನವೆಂಬರ್ (ಹಿ.ಸ.)
ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆ ಹಾಗೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಪೇಜಾವರ ಮಠದ ಯತಿಗಳು ನಿರಂತರವಾಗಿ ಶ್ರಮಿಸುತ್ತಿದ್ದು, ಈ ಕಾರ್ಯದಲ್ಲಿ ಅವರ ಬದ್ಧತೆ ಅಪಾರವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶ್ರೀಕೃಷ್ಣ-ವಾದಿರಾಜ ಮಠದಲ್ಲಿ ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಗೆ ವಿಜಯಪುರ ನಗರದ ಸಮಸ್ತ ಭಕ್ತಾದಿಗಳ ವತಿಯಿಂದ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶ್ರದ್ಧೆ, ಭಕ್ತಿ, ಸಮಾನತೆ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಪೇಜಾವರ ಮಠದ ಕೊಡುಗೆ ಮಹತ್ವದ್ದಾಗಿದೆ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಬಹುಕಾಲದ ಕನಸಾಗಿತ್ತು. ಇಂದು ಆ ಕನಸು ನನಸಾಗಿದ್ದು, ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಶ್ರೀರಾಮ ಮಂದಿರ ಟ್ರಸ್ಟ್ನ ಧರ್ಮದರ್ಶಿಗಳಾಗಿ ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾ-ಭಕ್ತಿಯಿಂದ ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಯತ್ನಾಳ ಹೇಳಿದರು.
ತಾವು ವಿದ್ಯಾರ್ಥಿ ಜೀವನದಿಂದಲೇ ಪೇಜಾವರ ಶ್ರೀಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ವಿಜಯಪುರದಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣವಾಗಬೇಕು ಎಂಬ ಆಶಯದಿಂದ ಭಕ್ತರ ಪರವಾಗಿ ಗುರುಗಳಲ್ಲಿ ಮನವಿ ಮಾಡಿದ್ದೆ. ಆ ಮನವಿಯನ್ನು ಮನ್ನಿಸಿ ಮಂದಿರ ನಿರ್ಮಾಣಕ್ಕೆ ಆಶೀರ್ವದಿಸಿರುವುದು ತಮ್ಮ ಪಾಲಿಗೆ ಸ್ಮರಣೀಯ ಸಂಗತಿಯಾಗಿದೆ ಎಂದು ಅವರು ಹೇಳಿದರು.
₹7 ಕೋಟಿ ವೆಚ್ಚದಲ್ಲಿ ಆಧುನಿಕ ವಿದ್ಯಾರ್ಥಿ ನಿಲಯ
ವಿಜಯಪುರದಲ್ಲಿ ಶ್ರೀಗಳು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ಸುಮಾರು ₹7 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಹತ್ವದ ಕಾರ್ಯಕ್ಕೆ ಅಗತ್ಯವಿರುವ ಹೆಚ್ಚಿನ ಅನುದಾನ ಹಾಗೂ ದೇಣಿಗೆ ಒದಗಿಸಲು ತಮ್ಮಿಂದಾದ ಸಂಪೂರ್ಣ ಸಹಕಾರ ನೀಡುವುದಾಗಿ ಯತ್ನಾಳ ಭರವಸೆ ನೀಡಿದರು.
ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಈ ಯೋಜನೆ ಸಮಾಜಮುಖಿ ಕಾರ್ಯವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಇಂತಹ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.ಹಿಂದುತ್ವದ ಪ್ರತಿಪಾದನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡಿಸುವಲ್ಲಿಯೂ ಪೇಜಾವರ ಶ್ರೀಗಳ ಪಾತ್ರ ಮಹತ್ವದ್ದಾಗಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನ್ಯಾಯವಿದ್ದಲ್ಲಿ ಗಟ್ಟಿತನವಿರುತ್ತದೆ: ಪೇಜಾವರ ಶ್ರೀ
ಬಳಿಕ ಆಶೀರ್ವಚನ ನೀಡಿದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ನ್ಯಾಯದ ಪರವಾಗಿ ಗಟ್ಟಿಯಾಗಿ ನಿಲ್ಲುವ ಗುಣ ಬಸನಗೌಡ ಪಾಟೀಲ ಯತ್ನಾಳ ಅವರಲ್ಲಿದೆ. ಜನರ ಪರವಾಗಿ ಧ್ವನಿ ಎತ್ತುವ ಅವರ ಗುಣ ಮೆಚ್ಚುವಂತಹದ್ದು. ನ್ಯಾಯದ ಪರವಾದ ಗಟ್ಟಿತನಕ್ಕೆ ಸದಾ ಜನರ ಬೆಂಬಲ ದೊರೆಯುತ್ತದೆ ಎಂದು ಹೇಳಿದರು.
ವಿಜಯಪುರದ ವಿದ್ಯಾರ್ಥಿ ನಿಲಯದ ಇತಿಹಾಸವನ್ನು ಸ್ಮರಿಸಿದ ಅವರು, 1964ರಲ್ಲಿಯೇ ಇಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಯಾಗಿತ್ತು. ತಾವು ಜನ್ಮವೆತ್ತಿದ ವರ್ಷವೂ 1964 ಆಗಿರುವುದು ವಿಶೇಷ ಎಂದು ಹೇಳಿದರು.
ಹಿಂದಿನ ಪೇಜಾವರ ಯತಿಗಳು ದೂರದೃಷ್ಟಿಯಿಂದ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ, ಬಡ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ನೆರವಾಗಿದ್ದರು. ಕಾಲಕ್ರಮೇಣ ಕಟ್ಟಡಕ್ಕೆ ಆಧುನಿಕ ಸೌಲಭ್ಯಗಳ ಅಗತ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ಸುಮಾರು ₹7 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.
ಈ ಮಹತ್ವದ ಯೋಜನೆ ಪೂರ್ಣಗೊಳ್ಳಲು ವಿಜಯಪುರದ ಜನತೆ ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಶ್ರೀಗಳು ಮನವಿ ಮಾಡಿದರು. ಶ್ರೀಮಠವು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಜನರಲ್ಲಿ ಶ್ರದ್ಧೆ, ಭಕ್ತಿ, ಉತ್ತಮ ಸಂಸ್ಕಾರ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಶ್ರೀಮಠ–ವಿಜಯಪುರಕ್ಕೆ ಅವಿನಾಭಾವ ಸಂಬಂಧ
ಪೇಜಾವರ ಶ್ರೀಮಠದ ವಿಜಯಪುರ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ಮಾತನಾಡಿ, ದೇಶದ ವಿವಿಧ ಭಾಗಗಳಲ್ಲಿ ಪೇಜಾವರ ಮಠದ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸಮಸ್ತ ಹಿಂದೂ ಸಮಾಜಕ್ಕೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ಉತ್ತಮ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರೀಮಠದ ಯತಿಗಳ ಕೊಡುಗೆ ಅಪಾರವಾಗಿದೆ ಎಂದರು.
ವಿಜಯಪುರ ಜಿಲ್ಲೆಗೂ ಪೇಜಾವರ ಶ್ರೀಮಠಕ್ಕೂ ಅವಿನಾಭಾವ ಸಂಬಂಧವಿದೆ. ಹಿಂದಿನ ಗುರುಗಳು ವಿಜಯಪುರ ಜಿಲ್ಲೆಯನ್ನು ದತ್ತು ಪಡೆದು, ಬರಗಾಲದ ಸಂದರ್ಭದಲ್ಲಿ ಗಂಜಿ ಕೇಂದ್ರಗಳನ್ನು ಆರಂಭಿಸಿ ಜನರಿಗೆ ನೆರವಾಗಿದ್ದರು. ಸರ್ಕಾರದೊಂದಿಗೆ ಕೈಜೋಡಿಸಿ ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗಿರುವುದು ಶ್ರೀಮಠದ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು
2031ರಲ್ಲಿ ಹಿಂದಿನ ಗುರುಗಳ ಜನ್ಮ ಶತಮಾನೋತ್ಸವ ಆಚರಿಸಲಾಗಲಿದ್ದು, ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಸಂಕಲ್ಪ ಕೈಗೊಂಡಿದ್ದಾರೆ. ಈ ಸಂಕಲ್ಪದಲ್ಲಿ ವಿಜಯಪುರದ ಅಖಿಲ ಭಾರತ ಮಧ್ವ ಮಹಾಮಂಡಳದ ವಿದ್ಯಾರ್ಥಿ ನಿಲಯ ನಿರ್ಮಾಣವೂ ಪ್ರಮುಖವಾಗಿದೆ. ಈ ಕಾರ್ಯಕ್ಕೆ ಸಮಿತಿ ಸಂಪೂರ್ಣ ಬೆಂಬಲವಾಗಿ ನಿಂತಿದೆ ಎಂದರು.
ಭಕ್ತರ ದೇಣಿಗೆ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವು
ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಸ್ವಾಗತಿಸಿ ಮಾತನಾಡಿ, ವಿದ್ಯಾರ್ಥಿ ನಿಲಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಭಕ್ತಾದಿಗಳು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.
ದಾನಿಗಳು ನೀಡುವ ಪ್ರತಿಯೊಂದು ರೂಪಾಯಿಯೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಭವಿಷ್ಯ ನಿರ್ಮಾಣಕ್ಕೆ ನೆರವಾಗಲಿದೆ. ಆದ್ದರಿಂದ ಸಮಾಜದ ಎಲ್ಲ ವರ್ಗದ ಜನರು ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನವದೆಹಲಿಯಲ್ಲಿ ಚಾತುರ್ಮಾಸ್ಯ ವ್ರತವನ್ನು ಪೂರ್ಣಗೊಳಿಸಿ ವಿಜಯಪುರಕ್ಕೆ ಆಗಮಿಸಿದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರನ್ನು ಸಮಸ್ತ ಭಕ್ತಾದಿಗಳ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಕಾಸ ಪದಕಿ ವಂದಿಸಿದರು. ಶ್ರೀಧರ ಜೋಶಿ ನಿರೂಪಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಸತೀಶ್ಚಂದ್ರ ಕುಲಕರ್ಣಿ, ಅಖಿಲ ಭಾರತ ಮಧ್ವ ಮಹಾಮಂಡಳದ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ, ಸಮಿತಿ ಪದಾಧಿಕಾರಿಗಳಾದ ಡಾ. ಮಲಘಾಣ, ಡಾ. ಮಂಗಲಗಿ, ವಿ.ಸಿ. ಕುಲಕರ್ಣಿ, ವಿ.ಬಿ. ಕುಲಕರ್ಣಿ, ಅಶೋಕರಾವ್, ಮೋಹನ ಕೌತಾಳ, ಪಂ. ವಾಸುದೇವಾಚಾರ್ಯ ಸೇರಿದಂತೆ ವಿಜಯ್ ಜೋಶಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಂದ ತೊಟ್ಟಿಲು ಪೂಜೆ ನೆರವೇರಿಸಲಾಯಿತು. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande