
ಬಾಗಲಕೋಟೆ, 03 ನವೆಂಬರ್ (ಹಿ.ಸ.)
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಶೀಘ್ರ ಜಾರಿಗೆ ತರಬೇಕು ಎಂದು ಆಗ್ರಹಿಸಿ ಮಾದಿಗ ಜಾತಿ ಹಾಗೂ ಉಪಜಾತಿ ಸಂಘಟನೆಗಳ ರಾಜ್ಯ ಒಕ್ಕೂಟದ ಮುಖಂಡರು ಮಂಗಳವಾರ ಬಾಗಲಕೋಟೆ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಬವರಾಜ ಲಗಳಿ, ಪರಿಶಿಷ್ಟ ಜಾತಿಗಳಲ್ಲಿರುವ ವಿವಿಧ ಸಮುದಾಯಗಳಿಗೆ ಅವರ ಜನಸಂಖ್ಯೆ ಹಾಗೂ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ನ್ಯಾಯಯುತ ಅವಕಾಶ ದೊರೆಯಬೇಕು. ಒಳ ಮೀಸಲಾತಿ ಜಾರಿಯಿಂದ ಹಲವು ವರ್ಷಗಳಿಂದ ಅವಕಾಶಗಳಿಂದ ವಂಚಿತರಾಗಿರುವ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾದ ನಿರ್ಧಾರ ಕೈಗೊಂಡು, ಯಾವುದೇ ವಿಳಂಬ ಮಾಡದೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿಯ ಪ್ರಯೋಜನ ಸಮರ್ಪಕವಾಗಿ ಹಂಚಿಕೆಯಾಗುವಂತೆ ಕ್ರಮ ವಹಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.
ಮಾದಿಗ ಹಾಗೂ ವಿವಿಧ ಉಪಜಾತಿಗಳ ಜನರು ಹಲವು ವರ್ಷಗಳಿಂದ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಸಾಮಾಜಿಕ ನ್ಯಾಯದ ಆಶಯವನ್ನು ಸಾಕಾರಗೊಳಿಸಲು ಒಳ ಮೀಸಲಾತಿ ಜಾರಿಗೊಳಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಸಮುದಾಯಗಳ ಬೇಡಿಕೆಗೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande