ಇಂಡಿ ತಾಲೂಕಿನಲ್ಲಿ ವಿಬಿಜಿ ರಾಮ್ ಜಿ ಯೋಜನೆ ಪ್ರಗತಿ ಪರಿಶೀಲಿಸಿದ ಪ್ರಕಾಶ ವಡ್ಡರ
ವಿಜಯಪುರ, 03 ನವೆಂಬರ್ (ಹಿ.ಸ.) ವಿಜಯಪುರ ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಇಂಡಿ ತಾಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ವಿಬಿಜಿ ರಾಮ್ ಜಿ ಯೋಜನೆಯ ಪ್ರಗತಿ, ಗ್ರಾಮೀಣ ಉದ್ಯೋಗ ಸೃಷ್ಟಿ, ಪಂಚಾಯಿತಿ ಆಡಳಿತ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಸಮಗ್
ರೋಜಗಾರ ಯೋಜನೆ


ವಿಜಯಪುರ, 03 ನವೆಂಬರ್ (ಹಿ.ಸ.)

ವಿಜಯಪುರ ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಇಂಡಿ ತಾಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ವಿಬಿಜಿ ರಾಮ್ ಜಿ ಯೋಜನೆಯ ಪ್ರಗತಿ, ಗ್ರಾಮೀಣ ಉದ್ಯೋಗ ಸೃಷ್ಟಿ, ಪಂಚಾಯಿತಿ ಆಡಳಿತ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.

ತಾಲೂಕಿನ ಹಂಜಗಿ, ಬಬಲಾದ ಹಾಗೂ ಭತಗುಣಕಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಿದರು.

ಹಂಜಗಿ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಪರಿಶೀಲನೆ

ಹಂಜಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವಡಿಹಾಳ ವಸ್ತಿ–ಮಾಳಗೆ ವಸ್ತಿ ಕಾಲುವೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಪ್ರಕಾಶ ವಡ್ಡರ ಅವರು ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ಕಾಮಗಾರಿಯಲ್ಲಿ ತೊಡಗಿದ್ದ ಕೂಲಿಕಾರರೊಂದಿಗೆ ಸಂವಾದ ನಡೆಸಿ, ಯೋಜನೆಯಡಿ ದೊರೆಯುತ್ತಿರುವ ಉದ್ಯೋಗಾವಕಾಶಗಳು, ಕೂಲಿ ಹಾಗೂ ಗ್ರಾಮೀಣ ಜನರಿಗೆ ಯೋಜನೆಯಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ಪಡೆದರು. ಹೆಚ್ಚಿನ ಅರ್ಹ ಕೂಲಿಕಾರರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಬಲಾದ ಗ್ರಾಪಂನಲ್ಲಿ ದಾಖಲೆಗಳ ಪರಿಶೀಲನೆ

ಬಬಲಾದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು ಸಿಬ್ಬಂದಿಗಳ ಹಾಜರಾತಿ, ಚಲನವಲನ ವಹಿ, ನಗದು ವಹಿ ಹಾಗೂ ಸಂದರ್ಶಕರ ವಹಿ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಪಂಚಾಯಿತಿ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ, ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸುವಂತೆ ಸೂಚಿಸಿದರು. ಅಲ್ಲದೆ, ಎಲ್ಲ ವಹಿಗಳನ್ನು ನಿಯಮಾನುಸಾರ ಮತ್ತು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಈ-ಸ್ವತ್ತು ಅಭಿಯಾನದ ಪ್ರಗತಿಯನ್ನೂ ಪರಿಶೀಲಿಸಿದ ಅವರು, ಅರ್ಹ ಫಲಾನುಭವಿಗಳಿಗೆ ಆಸ್ತಿ ದಾಖಲೆಗಳನ್ನು ತ್ವರಿತವಾಗಿ ವಿತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರಿಗೆ ಈ-ಸ್ವತ್ತು ಸೇವೆಗಳ ಕುರಿತು ಸೂಕ್ತ ಮಾಹಿತಿ ನೀಡುವ ಮೂಲಕ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಭತಗುಣಕಿಯಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ

ಭತಗುಣಕಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಂಚಾಯಿತಿ ದಾಖಲೆಗಳನ್ನು ಪರಿಶೀಲಿಸಿ, ಈ-ಸ್ವತ್ತು ಅಭಿಯಾನದ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ವಿಬಿಜಿ ರಾಮ್ ಜಿ ಯೋಜನೆಯಡಿ ನಿಗದಿಪಡಿಸಿರುವ ಮಾನವ ದಿನಗಳ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಬೇಡಿಕೆ ಆಧಾರಿತವಾಗಿ ಅರ್ಹ ಕೂಲಿಕಾರರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಸೂಚಿಸಿದರು.

ಗ್ರಾಮೀಣ ಭಾಗದ ಜನರಿಗೆ ಯೋಜನೆಯಡಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಶೇ.100ರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಕಾಶ ವಡ್ಡರ ಅವರು ನಿರ್ದೇಶನ ನೀಡಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಪರಿಶೀಲನೆ

ಇಂಡಿ ತಾಲೂಕಿನ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು LKG, UKG, 1ನೇ ಹಾಗೂ 6ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ, ಪಾಠಗಳ ಕುರಿತು ಪ್ರಶ್ನೆಗಳನ್ನು ಕೇಳಿ ಅವರ ಕಲಿಕಾ ಪ್ರಗತಿಯನ್ನು ಅವಲೋಕಿಸಿದರು.

ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಕರು ನಿರಂತರವಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಅರಿವು ಕೇಂದ್ರಕ್ಕೂ ಭೇಟಿ

ನಂತರ ಅರಿವು ಕೇಂದ್ರಕ್ಕೆ ಭೇಟಿ ನೀಡಿದ ಪ್ರಕಾಶ ವಡ್ಡರ ಅವರು ಅಲ್ಲಿನ ಪುಸ್ತಕಗಳ ನಿರ್ವಹಣೆ ಹಾಗೂ ಓದುಗರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಅರಿವು ಕೇಂದ್ರವನ್ನು ಸದಾ ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಜನರು ಕೇಂದ್ರದ ಸದುಪಯೋಗ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಗಳ ಅನುಷ್ಠಾನ, ದಾಖಲೆಗಳ ನಿರ್ವಹಣೆ, ಸಾರ್ವಜನಿಕ ಸೇವೆ ಹಾಗೂ ಮೂಲಭೂತ ಸೌಲಭ್ಯಗಳ ಒದಗಿಸುವಿಕೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ಸಂಜಯ ಖಡೆಗೇಕರ, ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ್) ಪ್ರಕಾಶ ರಾಠೋಡ, ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande